ಕೇಂದ್ರದಿಂದ ಬಿಗ್ ಶಾಕ್..! ಮಕ್ಕಳ ಸುರಕ್ಷತೆಗೆ ವಿಫಲ.. ಇನ್‌ಸ್ಟಾಗ್ರಾಮ್ ವಿರುದ್ಧ ಸಮನ್ಸ್ ಜಾರಿ!
Views: 74
ಕನ್ನಡ ಕರಾವಳಿ ಸುದ್ದಿ:ಸಾಮಾಜಿಕ ಮಾಧ್ಯಮದ ‘ಇನ್‌ಸ್ಟಾಗ್ರಾಮ್’ ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಯನ್ನು ಉತ್ತೇಜಿಸುವಂತಹ ಆಕ್ಷೇಪಾರ್ಹ ಜಾಹೀರಾತುಗಳು ಪ್ರದರ್ಶನಗೊಂಡಿರುವುದನ್ನು ಕೇಂದ್ರ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆಯಾದ ‘ಮೆಟಾ’ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಮನ್ಸ್ ಜಾರಿ ಮಾಡಿದೆ.
ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಖಡಕ್ ಸಂದೇಶ ರವಾನಿಸಿದೆ
ಪ್ರಕರಣದ ಹಿನ್ನೆಲೆ: ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಮತ್ತು ಅವರ ಮೇಲಿನ ದೌರ್ಜನ್ಯವನ್ನು ಬಿಂಬಿಸುವ ಕೆಲವು ಪ್ರಾಯೋಜಿತ ಜಾಹೀರಾತುಗಳು ಸಾರ್ವಜನಿಕರ ಗಮನಕ್ಕೆ ಬಂದಿದ್ದವು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರವು ತಕ್ಷಣದ ಕ್ರಮಕ್ಕೆ ಮುಂದಾಗಿದೆ.
ಐಟಿ ಕಾಯ್ದೆಯ ಅಡಿಯಲ್ಲಿ ಮೆಟಾ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು, ನವದೆಹಲಿಯ ಸಚಿವಾಲಯದ ಮುಂದೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಲಾಗಿದೆ.
ನಿಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಇಂತಹ ಸಂವೇದನಾಶೀಲ ಮತ್ತು ಕಾನೂನುಬಾಹಿರ ಜಾಹೀರಾತುಗಳು ಪ್ರದರ್ಶನಗೊಳ್ಳಲು ಹೇಗೆ ಸಾಧ್ಯವಾಯಿತು? ನಿಮ್ಮ ಕಂಟೆಂಟ್ ಫಿಲ್ಟರಿಂಗ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಎಲ್ಲಿ ವಿಫಲವಾಗಿವೆ ಎಂದು ಸರ್ಕಾರ ಪ್ರಶ್ನಿಸಿದೆ.






