ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಪರಿಣತ ಕುಮಟಾದ ರಾಘವೇಂದ್ರ ವಿಶೇಷ ಪೂಜೆ

Views: 134
ದಕ್ಷಿಣ ಕನ್ನಡ: ಭಾರತ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ತಂಡದ ಥ್ರೋಡೌನ್ ಪರಿಣತ ರಾಘವೇಂದ್ರ ಅವರು ಬುಧವಾರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸಲ್ಲಿಸಿದರು.
ಈ ಹಿಂದೆ ಕುಕ್ಕೆಗೆ ಬಂದಿದ್ದ ಇವರು ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರೆ ಸೇವೆ ನೆರವೇರಿಸುವುದಾಗಿ ಹರಕೆ ಮಾಡಿಕೊಂಡಿದ್ದರು. ಅದರಂತೆ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಣೆ ಮಾಡಿದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ರಾಘವೇಂದ್ರ, ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಪರಿಣತರಾಗಿ ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಚಯದವರ ಮೂಲಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿದ್ದ ಅವರು ಕಾಲಕ್ರಮೇಣ ಭಾರತ ತಂಡದ ಭಾಗವಾಗಿದ್ದಾರೆ. ಸ್ವಂತ ಶ್ರಮದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ, ಭಾರತ ತಂಡದ ಬ್ಯಾಟಿಂಗ್ ಯಶಸ್ಸಿನಲ್ಲಿ ಅಮೂಲ್ಯ ಕಾಣಿಕೆ ನೀಡುತ್ತಿದ್ದಾರೆ.
ರಾಘವೇಂದ್ರ ಅವರಿಗೆ ಸುಬ್ರಹ್ಮಣ್ಯ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು ಅವರು ಶಾಲು ಹೊದಿಸಿ, ಮಹಾಪ್ರಸಾದ ಮತ್ತು ಮಹಾಭಿಷೇಕದ ಪ್ರಸಾದ ನೀಡಿದರು. ಬಳಿಕ ದೇವಳದ ಆಡಳಿತ ಕಚೇರಿಯಲ್ಲಿ ಅವರನ್ನು ಅಲ್ಲಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಳದ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್., ಹರೀಶ್, ಕೃಷ್ಣಪ್ರಸಾದ್ ಕೆ.ಜಿ.ಭಟ್, ಸುಬ್ರಹ್ಮಣ್ಯದ ಸ್ನೇಹಿತರಾದ ಪಪ್ಪು ಲೋಕೇಶ್, ದೀಪಕ್ ನಂಬಿಯಾರ್ ಉಪಸ್ಥಿತರಿದ್ದರು.






