ಕುಂದಾಪುರ: ಶೆಟ್ರಕಟ್ಟೆ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್‌ಗೆ ಟಿಪ್ಪರ್ ಡಿಕ್ಕಿ:18 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
Views: 311
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ತಲ್ಲೂರು – ನೇರಳಕಟ್ಟೆ ಮುಖ್ಯ ರಸ್ತೆಯ ಶೆಟ್ರಕಟ್ಟೆಯ ತಿರುವಿನಲ್ಲಿ ಸೋಮವಾರ ಸಂಜೆ ಹೊತ್ತಿಗೆ ವೇಗವಾಗಿ ಬಂದ ಮಣ್ಣು ಸಾಗಾಟದ ಟಿಪ್ಪರ್ ಲಾರಿಯೊಂದು ಕೆಎಸ್ಸಾರ್ಟಿಸಿ ಬಸ್‌ಗೆ ಢಿಕ್ಕಿಯಾಗಿ 18 ಮಂದಿ ಗಾಯಗೊಂಡು ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳ ಪೈಕಿ ಮೂವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆ ಪಡೆದಿದ್ದು, ಮೂವರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ 7 ಮಂದಿ ಇದ್ದು , ಐವರು ಒಳರೋಗಿಗಳಾಗಿ, ಚಿನ್ಮಯಿ ಆಸ್ಪತ್ರೆಯಲ್ಲಿ ಒಬ್ಬರು ಒಳರೋಗಿಯಾಗಿ ದಾಖಲಾಗಿದ್ದಾರೆ.
ಗಂಭೀರ ಗಾಯಗೊಂಡ ಕುಂದಾಪುರ ಜೂನಿಯರ್ ಕಾಲೇಜು ವಿದ್ಯಾರ್ಥಿನಿಯರಾದ ಚೈತ್ರಾ (16) ನೇರಳಕಟ್ಟೆ ಹಾಗೂ ಅರ್ಚನಾ (16) ನೇರಳಕಟ್ಟೆ ಅವರನ್ನು ಮಣಿಪಾಲ ಆಸ್ಪತ್ರೆಯ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಆಜಿ ಗ್ರಾ.ಪಂ. ಸದಸ್ಯೆ ಶಾರದಾ (50) ಅವರಿಗೆ ತೀವ್ರ ತರದ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಟಿಪ್ಪರ್ ಚಾಲಕ ರಾಘವೇಂದ್ರ (40) ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ (16), ಆಶಿಶ್ (16), ಅಭಿಲಾಶ್ (16), ಸತ್ಯವತಿ (16), ಪ್ರಯಾಣಿಕರಾದ ಮಂಜುನಾಥ್ (43), ಮಮತಾ ಆಜ್ರ (37), ಸನ್ವಿತ್ (8) ದಾಖಲಾಗಿದ್ದಾರೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಆಜ್ರಿಯ ನಿವಾಸಿ ನಮ್ಮ ಭೂಮಿಯ ವಿದ್ಯಾರ್ಥಿ ಹರೀಶ್ (15), ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ (16) ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಮತಿ (35) ಹಾಗೂ ಸಾವಿತ್ರಿ (50), ಸುಜಾನ್ (15) ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಕುಂದಾಪುರದಿಂದ ಹೊರಟ ಬಸ್ ಶೆಟ್ರಕಟ್ಟೆ ಸಮೀಪ ಪ್ರಯಾಣಿಕರೊಬ್ಬರನ್ನು ತುಸು ಮುಂದಕ್ಕೆ ಚಲಿಸುತ್ತಿದ್ದಂತೆ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಬಸ್ಸಿನ ಚಾಲಕನ ಬದಿಗೆ ಢಿಕ್ಕಿ ಹೊಡೆಯಿತು. ಟಿಪ್ಪರ್ ವೇಗವಾಗಿ ಬರುವುದನ್ನು ಗಮನಿಸಿ ಬಸ್ ಚಾಲಕ ಎಡಕ್ಕೆ ತಿರುಗಿಸಿದ್ದರಿಂದ ಮುಖಾಮುಖಿ ಢಿಕ್ಕಿಯಾಗುವುದು ತಪ್ಪಿತು.
ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರದ ಸರಕಾರಿ, ಖಾಸಗಿ ಆಸ್ಪತ್ರೆಗಳಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನಕ್ಕಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಭೇಟಿ ನೀಡಿದರು.

ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರು ಮಣಿಪಾಲ, ಕುಂದಾಪುರ ಸರಕಾರಿ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ರೋಗಿಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಘಟನೆ ನಡೆದ ಶೆಟ್ರಕಟ್ಟೆಗೆ ಭೇಟಿ ನೀಡಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಒಟ್ಟು 18 ಮಂದಿ ಗಾಯಗೊಂಡಿದ್ದಾರೆ. ಟಿಪ್ಪರ್ ಚಾಲಕನೂ ಗಾಯಗೊಂಡಿದ್ದು ಶೀಘ್ರ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುವುದು ಎಂದರು.






