ಕುಂದಾಪುರ: ಮನೆ ಮನೆಯಲ್ಲೂ ಗೆಜ್ಜೆನಾದ ತಾಳ ಮೇಳಗಳ ಸಂಚಲನ “ಚಿಕ್ಕಮೇಳ”

Views: 186
ಕನ್ನಡ ಕರಾವಳಿ ಸುದ್ದಿ: ಗಜಮುಖದವಗೆ ಗಣಪಗೆ…. ಎಂಬ ಆಲಾಪನೆ ಊರಿನ ಪ್ರತಿ ಮನೆಯಿಂದಲೂ ಕೇಳಿ ಬಂದಾಗ ಅರೆ.. ಅದೇನು…? ಯಕ್ಷಗಾನ ಬಯಲಾಟ ಮೈದಾನದಲ್ಲಿ ನಡೆಯದೆ ಮನೆಮನೆಯಲ್ಲಿ ನಡೆಯುತ್ತದೆಯೇ.. ಎಂಬ ಸಣ್ಣ ಕುತೂಹಲ ಮೂಡದಿರದು. ಕರಾವಳಿಯಲ್ಲಿ ಪ್ರಸಿದ್ಧವಾಗಿರುವ ಗಂಡುಕಲೆಗೆ ತನ್ನದೇ ಆದ ವಿಶಿಷ್ಟ ವಿಧಾನಗಳಿವೆ ಅದರಲ್ಲಿ ಚಿಕ್ಕಮೇಳವೂ ಒಂದು
ಭಾಗವತಿಗೆ, ಮದ್ದಳೆ, ಹಾರ್ಮೋನಿಯಂ ಜೊತೆಗೆ ಮುಮ್ಮೇಳನದ ಇಬ್ಬರು ವೇಷಧಾರಿಗಳು ಯಕ್ಷಗಾನದ ಸಣ್ಣ ಸಣ್ಣ ಕತೆಯನ್ನು ಪ್ರಸ್ತುತ ಪಡಿಸುವುದು ಚಿಕ್ಕಮೇಳದ ವಿಶಿಷ್ಟತೆ. ಪೌರಾಣಿಕ ಪ್ರಸಂಗದ ಒಂದು ಎಳೆಯನ್ನು ಕೇವಲ 10 ರಿಂದ 15 ನಿಮಿಷದಲ್ಲಿ ಮನೆಯ ಜಗಲಿಯಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ.
ಮನೆಯೊಳಗಿನ ದೋಷ, ಮನದ ಕ್ಲೇಷ ನಿವಾರಣೆಗೆ ಶ್ರೀವಿನಾಯಕನನ್ನು ಹೊತ್ತು ಮನೆಯೊಳಗೆ ಇಟ್ಟು ಮೊದಲ ಪೂಜೆ ಸಲ್ಲಿಸಿ, ಚಿಕ್ಕಮೇಳದ ಕಲಾ ಪ್ರದರ್ಶನದಿಂದ ವಿದ್ಯೆ, ಬುದ್ಧಿ, ಧೈರ್ಯ ಕೃಷಿ, ವ್ಯಾಪಾರ ಮುಂತಾದ ಸಂಕಲ್ಪ ಸಿದ್ಧಿಗಾಗಿ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ಮೊದಲೇ ತಿಳಿಸಿ ಈ ಸೇವೆಯನ್ನು ಪ್ರತಿನಿತ್ಯ ಸಂಜೆ 6 ರಿಂದ ರಾತ್ರಿ 10 ರೊಳಗೆ ಸುಮಾರು 15-20 ಮನೆಗಳಲ್ಲಿ ಪ್ರದರ್ಶನ ನೀಡಲಾಗುತ್ತಿದೆ.
ಶ್ರೀ ದೇವರಿಗೆ ಮನೆಯಲ್ಲಿ ನೃತ್ಯ ಸೇವೆ ಮಾಡಿಸಿದಲ್ಲಿ ಸಕಲ ಇಷ್ಟಾರ್ಥ ಫಲ ಪ್ರಾಪ್ತವಾಗುತ್ತದೆ ಎಂಬ ಮನೋಭಾವದಿಂದ ಶೃದ್ಧಾ ಭಕ್ತಿಪೂರ್ವಕವಾಗಿ ಸೇವೆಯನ್ನು ಮಾಡಿಸಿ ಶ್ರೀದೇವರ ಕೃಪೆಗೆ ಪಾತ್ರರಾಗುವ ಅಪೇಕ್ಷೆಯು ಇಲ್ಲಿದೆ. ಸಾಂಪ್ರದಾಯಿಕ ನಿಲುವನ್ನು ಬಿಟ್ಟು ಕೊಡದೆ, ಧರ್ಮ ಸಂಸ್ಕೃತಿಗೆ ಚ್ಯುತಿ ಬಾರದ ಹಾಗೆ ಸೀಮಿತ ಅವಧಿಯಲ್ಲಿ ಬಡವ ಬಲ್ಲಿದವರೆಂಬ ಬೇಧವಿಲ್ಲದೆ ಸಮಾನ ದೃಷ್ಟಿಯಿಂದ ಸೇವೆ ಮಾಡುತ್ತ ಪಟ್ಟಣ ಹಾಗೂ ಯುವಜನತೆಗೆ ಕಲೆಯಲ್ಲಿ ಆಸಕ್ತಿ ಹುಟ್ಟಿಸುವ ಕಾರ್ಯ ಕೂಡ ಇಂತಹ ಪ್ರದರ್ಶನದಿಂದ ಸಾಧ್ಯ
ಇತ್ತೀಚಿಗೆ ಕುಂದಾಪುರದ ರಕ್ಷಿತಾ ಎಂಟರ್ಪ್ರೈಸಸ್ ಇದರ ಮಾಲಿಕ ಹೂವಿನಕೆರೆ ರವೀಂದ್ರ ಶೆಟ್ಟಗಾರ್ ಮನೆಯಲ್ಲಿ ಯಕ್ಷ ಕಲಾ ವೈಭವ ಚಿಕ್ಕ ಮೇಳ ಕೋಟೇಶ್ವರ ಇವರು ಪ್ರಸ್ತುತಪಡಿಸಿದ “ಮಾಯಾ ಮೃಗಾವತಿ” ಪ್ರಸಂಗದಿಂದ ಆಯ್ದ ಎಳೆಯನ್ನು ಪ್ರದರ್ಶಿಸಲಾಯಿತು. ಮುಮ್ಮೆಳನ ಕಲಾವಿದರಾಗಿ ಧನರಾಜ್ ಮತ್ತು ಗಣೇಶ್ ಉತ್ತಮವಾಗಿ ಅಭಿನಯಿಸಿದ್ದಾರೆ.
ಹಿಮ್ಮೆಳನ ಕಲಾವಿದರಾಗಿ ಭಾಗವತ ನಾಗರಾಜ್ ಹಳೆ ಅಳಿವೆ ಕೋಟೇಶ್ವರ, ಮಹೇಶ್, ಅಶೋಕ್ ಹಿಲಿಯಾಣ,ನಿತೀಶ್ ಭಾಗವಹಿಸಿದ್ದರು.