ಕುಂದಾಪುರ: ಅಮಾಸೆಬೈಲಿನಲ್ಲಿ ಪ್ರಿಯಕರನೊಂದಿಗಿನ ಚಕ್ಕಂದಕ್ಕೆ ಅಡ್ಡಿಯಾಗಿದ್ದ ಮೂರೂವರೆ ವರ್ಷದ ಮಗುವಿಗೆ ತಾಯಿಯಿಂದ ಹಲ್ಲೆ; ಜಾಮೀನು ಅರ್ಜಿ ವಜಾ

Views: 809
ಕುಂದಾಪುರ :ಮೂರೂವರೆ ವರ್ಷ ಮಗುವಿನ ಮೇಲೆ ತಾಯಿ ಹಾಗೂ ಆಕೆಯ ಪ್ರಿಯಕರ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪೂರ್ಣಪ್ರಿಯಾ ಮತ್ತು ಆಕೆಯ ಪ್ರಿಯಕರ ಮಗುವಿನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು. ಸೆ.13ರಂದು ಈ ದುರ್ಘಟನೆ ಸಂಭವಿಸಿದೆ.
ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನೇ ತಾಯಿ, ಅನಾರೋಗ್ಯದ ಕಾರಣ ನೀಡಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದಳಾದರೂ ಮಗುವಿನ ಮೇಲಾದ ಗಾಯದ ಬಗ್ಗೆ ತಾಯಿ ಪೂರ್ಣ ಪ್ರಿಯಾ ಯಾವುದೇ ಮಾಹಿತಿ ನೀಡಿರಲಿಲ್ಲ.
ಮಗುವಿನ ಮೇಲಾದ ಗಾಯಗಳಿಂದ ಅನುಮಾನಗೊಂಡ ಜಿಲ್ಲಾ ಆರೋಗ್ಯಾಧಿಕಾರಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಮಗುವನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಮಗುವಿನ ಮೇಲೆ ತಾಯಿ ಹಾಗೂ ಪ್ರಿಯಕರ ಹಲ್ಲೆ ನಡೆಸಿರುವ ವಿಚಾರ ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಅಮಾಸೆಬೈಲು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮೊದಲಿಗೆ ಮಗು ಜಾರಿಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದ ತಾಯಿ ಪೂರ್ಣ ಪ್ರಿಯಾ ಆದರೆ ತೀವ್ರ ವಿಚಾರಣೆ ಬಳಿಕ ತಪ್ಪು ಒಪ್ಪಿಕೊಂಡಿದ್ದರು.
ಪೂರ್ಣ ಪ್ರಿಯಾಳ ಗಂಡ ಇತ್ತೀಚೆಗಷ್ಟೆ ನಿಧನರಾಗಿದ್ದರು. ಆ ಬಳಿಕ ಪ್ರಿಯಕರ ಸುಹೇಲ್ ಜೊತೆಗೆ ನಿಕಟ ಸಂಪರ್ಕದಲ್ಲಿದ್ದಳು. ಅವನು ಬಂದ ವೇಳೆ ಮಗು ಮಂಚದ ಮೇಲೆ ಮಲಗಿದ್ದ ಕಾರಣಕ್ಕೆ ಪಾಪಿ ತಾಯಿ ಹಾಗೂ ಪ್ರಿಯಕರ ಕುಪಿತಗೊಂಡು ಮಗುವಿನ ಮೇಲೆ ಅಮಾನುಷ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದರು.
ಅ.24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಆರೋಪಿಗಳು ಶರಣಾಗಿದ್ದು, ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದರೆ ಪ್ರಕರಣದ ಗಂಭೀರತೆ ಅರಿತು ಇದೀಗ ಎರಡನೆ ಹೆಚ್ಚುವರಿ ಸಿವಿಲ್ ಕೋರ್ಟ್ ಜೆಎಂಎಫ್‌ಸಿಯಲ್ಲಿ ಇಬ್ಬರ ಮಧ್ಯಂತರ ಜಾಮೀನು ಅರ್ಜಿ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಸೆಪ್ಟೆಂಬರ್ 13 ರಂದು ಮಾರಣಾಂತಿಕ ಹಲ್ಲೆಗೊಳಗಾದ ಮಗುವನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.ಪರೀಕ್ಷಿಸಿದ ವೈದ್ಯರು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಿದ್ದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಹೇಶ ದೇವಾಡಿಗ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿದ ನಂತರ ಅಮಾಸೆಬೈಲು ಠಾಣೆಗೆ ದೂರು ನೀಡಿದ್ದಾರೆ.
ಮಗು ಚೇತರಿಸಿಕೊಂಡ ನಂತರ ತಾಯಿ ಮಗುವನ್ನು ವಿಚಾರಿಸಲಾಗಿದೆ. ಮಗು ಮಂಚದಿಂದ ಜಾರಿ ಬಿದ್ದು ಗಾಯಗೊಂಡಿದೆ ಎಂದು ತಾಯಿ ಹೇಳಿಕೆ ನೀಡಿದ್ದಾಳೆ. ಈ ಪ್ರಕರಣವನ್ನು ಮಕ್ಕಳ ರಕ್ಷಣಾ ಸಮಿತಿ ತೀವ್ರ ವಿಚಾರಣೆ ನಡೆಸಿ, ಹಲ್ಲೆ ಪ್ರಕರಣವನ್ನು ಬಯಲಿಗೆ ಎಳೆದಿದ್ದಾರೆ. ಅಕ್ಟೋಬರ್ 24ರಂದು ಜಾಮೀನು ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಶರಣಾಗಿದ್ದ ಆರೋಪಿಗಳಿಗೆ ಮಧ್ಯಾಂತರ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಸಹಾಯಕ ಸರಕಾರಿ ಅಭಿಯೋಜಕ ಉದಯ್ ಕುಮಾರ್ ಜಾಮೀನು ರದ್ದು ಮಾಡಲು ಮನವಿ ಮಾಡಿಕೊಂಡಿದ್ದಾರೆ.