‘ಕಾಂತಾರ ಚಾಪ್ಟರ್ 1’ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟ ಹೊಂಬಾಳೆ ಫಿಲ್ಮ್

Views: 58
ಕನ್ನಡ ಕರಾವಳಿ ಸುದ್ದಿ:’ಕಾಂತಾರ ಚಾಪ್ಟರ್ 1′ ಇದೇ ಸಾಲಿನ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ ಎಂದು ಕಳೆದ ವರ್ಷವೇ ಚಿತ್ರತಂಡ ಅಧಿಕೃತ ಮಾಹಿತಿ ಪೂರೈಸಿತ್ತು. ಆದ್ರೆ, ಸಿನಿಮಾ ವಿಳಂಬವಾಗಲಿದೆ ಅನ್ನೋ ವದಂತಿ ಹರಡಿದೆ
‘ಕಾಂತಾರ’ ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ. ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ತನ್ನ ಮತ್ತೊಂದು ಭಾಗದೊಂದಿಗೆ ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ. ಈ ಬಾರಿ ವಿಭಿನ್ನ ಮತ್ತು ಅತ್ಯಾಕರ್ಷಕ ಕಥಾಹಂದರದೊಂದಿಗೆ ಬರಲಿದೆ ‘ಕಾಂತಾರ’.
ಸಹಜವಾಗಿ ಸಿನಿಮಾ ಸೀಕ್ವೆಲ್ಗಳೊಂದಿಗೆ ಮುಂದುವರಿಯುತ್ತವೆ. ಪ್ರೀಕ್ವೆಲ್ಗಳು ಕಡಿಮೆ. 2022ರ ಸೆಪ್ಟೆಂಬರ್ ಕೊನೆಗೆ ತೆರೆಕಂಡು ಸೂಪರ್ ಹಿಟ್ ಆಗಿರುವ ಕಾಂತಾರ ತನ್ನ ಹಿಂದಿನ ಭಾಗವನ್ನು ಸಿನಿಪ್ರಿಯರಿಗೆ ಕೊಡಲು ಸಜ್ಜಾಗಿದೆ. ಹೌದು, ‘ಕಾಂತಾರ ಚಾಪ್ಟರ್ 1’ ಇದೇ ಸಾಲಿನ ಅಕ್ಟೋಬರ್ಗೆ ತೆರೆಕಾಣಲಿದೆ ಎಂದು ಚಿತ್ರತಂಡ ಕಳೆದ ವರ್ಷ ಮಾಹಿತಿ ಕೊಟ್ಟಿತ್ತು.
ಆದ್ರೆ, ಸಿನಿಮಾ ಬಿಡುಗಡೆ ವಿಳಂಬ ಆಗಬಹುದು ಅನ್ನೋ ವದಂತಿ ಹರಡಿದೆ. ಕೆಲ ಸಮಯದ ಹಿಂದೆ ಅಫೀಶಿಯಲ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಬಿಟ್ಟರೆ, ಉಳಿದ ಯಾವುದೇ ಅಪ್ಡೇಟ್ಸ್ ಸಿನಿಪ್ರಿಯರಿಗೆ ಲಭ್ಯವಾಗಿಲ್ಲ. ಪೋಸ್ಟರ್ಸ್ ಅಥವಾ ಗ್ಲಿಂಪ್ಸ್ಗಾಗಿ ಪ್ರೇಕ್ಷಕರು ಬಹಳ ಕಾತರರಾಗಿದ್ದಾರೆ. ಆದರೆ, ಈವರೆಗೆ ಚಿತ್ರತಂಡ ಯಾವುದೇ ಮಾಹಿತಿ ಪೂರೈಸದ ಹಿನ್ನೆಲೆ, ಸಿನಿಮಾ ಬಿಡುಗಡೆ ವಿಳಂಬ ಆಗಲಿದೆಯೇನೋ ಎಂದು ಕೆಲವರು ಊಹಿಸಿದ್ದರು. ಆದ್ರೀಗ, ಚಿತ್ರತಂಡ ವದಂತಿಗಳ ಬಗ್ಗೆ ಮೌನ ಮುರಿದಿದೆ. ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಖಚಿತಪಡಿಸಿದೆ.
‘ಕಾಂತಾರ: ಒಂದು ದಂತಕಥೆ, ಅಧ್ಯಾಯ 1’ಕ್ಕೆ ಸಂಬಂಧಿಸಿದಂತೆ ಒಂದು ರೀಲ್ ಶೇರ್ ಮಾಡಲಾಗಿದೆ. ”ಬ್ರೋ, ಕಾಂತಾರ ಚಾಪ್ಟರ್ 1 ಬಿಡುಗಡೆ ದಿನಾಂಕ ಮುಂದೂಡಲಾಗುತ್ತದೆಯೇ?” ಎಂದು ಫ್ಯಾನ್ ಓರ್ವರು ಚಾಟ್ ಮಾಡಿರುವಂತೆ ವಿಡಿಯೋ ಆರಂಭವಾಗಿದೆ. ನಂತರ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ‘ಇಲ್ಲ’ ಎಂದು ಪ್ರತಿಕ್ರಿಯಿಸಲಾಗಿದೆ. ಈ ವಿಡಿಯೋಗೆ ರಕ್ಷಿತ್ ಶೆಟ್ಟಿ ಅವರ ಸೂಪರ್ ಹಿಟ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಟೈಟಲ್ ಟ್ರ್ಯಾಕ್ಅನ್ನು ಹಿನ್ನೆಲೆ ಸಂಗೀತವಾಗಿ ಬಳಸಲಾಗಿದೆ. ಈ ಮೂಲಕ ಯಾವುದೇ ಸಂಶಯ ಇಲ್ಲ, ಯಾವುದೇ ವಿಳಂಬ ಇಲ್ಲ. ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿರುವ ಅಕ್ಟೋಬರ್ 2, 2025ಕ್ಕೆ ಕಾಂತಾರ ಚಾಪ್ಟರ್ 1 ಬಿಡುಗಡೆ ಆಗಲಿದೆ ಎಂದು ಖಚಿತಪಡಿಸಿದ್ದಾರೆ.
ವಿಡಿಯೋ ನೋಡಿ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಂತಸಗೊಂಡಿದ್ದಾರೆ. ಚಿತ್ರದ ಗ್ಲಿಂಪ್ಸ್ ಅಥವಾ ಪೋಸ್ಟರ್ಸ್ ಅನಾವರಣಗೊಳಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದೇ ಸಾಲಿನ ಅಕ್ಟೋಬರ್ 2ರಂದು ಬಹುಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿರುವ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈ ಮೊದಲ ಭಾಗದಂತೆ ‘ಕಾಂತಾರ: ಒಂದು ದಂತಕಥೆ, ಅಧ್ಯಾಯ 1’ಕ್ಕೆ ರಿಷಬ್ ಶೆಟ್ಟಿ ಅವರೇ ರಚನೆ, ನಿರ್ದೇಶನದ ಜೊತೆ ಜೊತೆಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ದಕ್ಷಿಣ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಲಿದ್ದಾರೆ. ಮೊದಲ ಭಾಗ 15 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣಗೊಂಡಿತ್ತು. ಚಾಪ್ಟರ್ ಒಂದನ್ನು ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.