ಕಟ್ಕೆರೆ: ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ, ಸವಾರ ಆಸ್ಪತ್ರೆಗೆ ದಾಖಲು
Views: 2480
ಕನ್ನಡ ಕರಾವಳಿ ಸುದ್ದಿ: ಚಲಿಸುತ್ತಿದ್ದ ಬೈಕಿನ ಮೇಲೆ ಚಿರತೆಯೊಂದು ನಡೆಸಿದ ಪರಿಣಾಮ ಬೈಕ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದು ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೋಟೇಶ್ವರ ಸಮೀಪ ಕಟ್ಕೆರೆಯಲ್ಲಿ ಅ. 4ರಂದು ರಾತ್ರಿ ಸಂಭವಿಸಿದೆ.
ಕೋಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುಂದಾಪುರ ಗಾಯಗೊಂಡವರು. ಅವರು ಕಾರ್ಯ ನಿಮಿತ್ತ ತೆರಳಿ ಹೊರಗೆ ಹೋಗಿದ್ದವರು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದಾಗ ರಸ್ತೆ ಅಂಚಿನಿಂದ ಬೈಕ್ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿತು. ಪ್ರವೀಣ್ ಬೈಕನ್ನು ನಿಯಂತ್ರಿಸಲು ಯತ್ನಿಸಿದರೂ ಸಾಧ್ಯವಾಗದೆ ರಸ್ತೆಗೆ ಉರುಳಿತು. ಚಿರತೆ ಹತ್ತಿರದ ಕಾಡು ಸೇರಿದೆ. ಗಂಭೀರ ಗಾಯಗೊಂಡಿರುವ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಹೆದ್ದಾರಿಯಲ್ಲಿ ಕಾಡುಪ್ರಾಣಿ ಗಳಿಂದ ಎದುರಾಗುವ ಸಮಸ್ಯೆಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಲ್ಲಿಗೆ ಸಮೀಪ ಅಸೋಡು ಹಾಗೂ ಕಾಳಾವರದ ಕಕ್ಕೇರಿ ಪರಿಸರದಲ್ಲಿ ಚಿರತೆ ಸಂಚರಾದಿಂದ ಆ ಭಾಗದ ನಿವಾಸಿಗಳಲ್ಲಿ ಇನ್ನಷ್ಟು ಆತಂಕ ಉಂಟುಮಾಡಿದೆ.
ಕಕ್ಕೇರಿ ನಿವಾಸಿ ಚಂದ್ರಶೇಖರ ನಾವಡ ಅವರ ಮನೆಯ ಹಾಡಿಯಲ್ಲಿ ಹಗಲು ಹೊತ್ತಿನಲ್ಲಿ ಚಿರತೆ ಸಂಚರಿಸುವುದನ್ನು ಅವರು ಕಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಪಂದಿಸಿದ ಇಲಾಖೆ ಆ ಭಾಗದಲ್ಲಿ ಚಿರತೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಲಾಗಿದೆ.
ಅಸೋಡು, ಕಕ್ಕೇರಿ, ಹೂವಿನಕೆರೆ, ಕುರುವಾಡಿ, ಚಾರು ಕೊಟ್ಟಿಗೆ ಪರಿಸರದಲ್ಲಿ ರಾತ್ರಿ ಹಗಲೆನ್ನದೆ ಚಿರತೆ ಸಂಚರಿಸುತ್ತಿದ್ದು ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗುಡ್ಡ ಹಾಗೂ ಮರ-ಗಿಡಗಳು ಬೆಳೆದಿರುವ ಹೂವಿನಕೆರೆ ರೈಲ್ವೆ ಬ್ರಿಡ್ಜ್, ಕುರುವಾಡಿ ಪರಿಸರದಲ್ಲಿ ಚಿರತೆ ವಾಸವಾಗಿದ್ದು, ರಾತ್ರಿ ಆಗುತ್ತಿದ್ದಂತೆ ಗ್ರಾಮದ ಮನೆಗಳಿಗೆ ಪ್ರವೇಶಿಸಿ ಸಾಕು ಪ್ರಾಣಿಗಳಾದ ನಾಯಿ, ದನ ಕರುಗಳು ಮತ್ತು ಕೋಳಿಗಳ ಮೇಲೆ ದಾಳಿ ಮಾಡಿ ಹೊತ್ತುಕೊಂಡು ಹೋಗಿವೆ.






