ಇತರೆ

ಕುಂದಾಪುರ: ಹಟ್ಟಿಯಂಗಡಿಯ ಬಾರ್‌ ಮುಂಭಾಗದಲ್ಲಿ ಮಾತಿನ ಚಕಮಕಿಯ ವೇಳೆ ಇಬ್ಬರ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ 

Views: 64

ಕುಂದಾಪುರ: ಹಟ್ಟಿಯಂಗಡಿಯ ಬಾರ್‌ ಮುಂಭಾಗದಲ್ಲಿ ಮಾತಿನ ಚಕಮಕಿಯ ವೇಳೆ ಇಬ್ಬರ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ನಿಸರ್ಗ ಬಾರ್‌ ಮುಂಭಾಗದಲ್ಲಿ ನಡೆದ ಮಾತಿನ ಚಕಮಕಿಯ ವೇಳೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್‌ 15ರಂದು ಸಂತೋಷ ಶೆಟ್ಟಿ ಎಂಬವರು ತಮ್ಮ ಸ್ನೇಹಿತ ಪರೀಕ್ಷಿತ್‌ ಜೊತೆ ನಿಸರ್ಗ ಬಾರ್‌ ಹೊರಗಡೆ ನಿಂತಿದ್ದ ವೇಳೆ, ಪರೀಕ್ಷಿತ್‌ಗೆ ಫೋನ್‌ನಲ್ಲಿ ಕಾರ್ತಿಕ್‌ ಎಂಬಾತ ಅವಾಚ್ಯವಾಗಿ ಬೈದಿದ್ದಾನೆ ಎನ್ನಲಾಗಿದೆ.

ಬಳಿಕ ಪರೀಕ್ಷಿತ್‌ ಮತ್ತು ಕಾರ್ತಿಕ್‌ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರೀಕ್ಷಿತ್‌ ನಿಸರ್ಗ ಬಾರ್‌ನಲ್ಲಿರುವುದಾಗಿ ತಿಳಿಸಿದ್ದಾನೆ.

ನಂತರ ರಾತ್ರಿ ವೇಳೆ ಸತ್ಯವೇಲು, ಮುರುಳಿ, ಕಾರ್ತಿಕ್‌ ಹಾಗೂ ನಾಗರಾಜ್‌ ಎಂಬವರು ನಿಸರ್ಗ ಬಾರ್‌ ಮುಂಭಾಗಕ್ಕೆ ಬಂದಿದ್ದು, ಪರೀಕ್ಷಿತ್‌ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಮುರುಳಿ ಮತ್ತು ಸತ್ಯವೇಲು ಪರೀಕ್ಷಿತ್‌ ಮೇಲೆ ಹಲ್ಲೆ ಮಾಡಲು ಮುಂದಾದಾಗ, ಸಂತೋಷ ಶೆಟ್ಟಿ ತಡೆಯಲು ಹೋಗಿದ್ದಾರೆ. ಆಗ ಸತ್ಯವೇಲು ಮುಳ್ಳಿನಂತಹ ಆಯುಧದಿಂದ ಸಂತೋಷ ಶೆಟ್ಟಿಯ ಎಡ ಕಣ್ಣಿನ ಭಾಗಕ್ಕೆ ಹೊಡೆದಿದ್ದು, ಮುರುಳಿ ಕೂಡ ಅದೇ ರೀತಿಯ ಆಯುಧದಿಂದ ಅವರ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ಸಂತೋಷ ಶೆಟ್ಟಿಗೆ ರಕ್ತಗಾಯವಾಗಿದ್ದು, ಕಣ್ಣಿನಿಂದಲೂ ರಕ್ತಸ್ರಾವವಾಗಿದೆ. ಪರೀಕ್ಷಿತ್‌ ಅವರನ್ನು ರಕ್ಷಿಸಲು ಮುಂದಾದಾಗ ಆರೋಪಿಗಳು ಅವರ ಬಲಕೈಯನ್ನು ತಿರುಚಿದ್ದಾರೆ ಎನ್ನಲಾಗಿದೆ.

ಈ ವೇಳೆ 112 ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರನ್ನು ಕಂಡ ಆರೋಪಿಗಳು ಸಂತೋಷ ಶೆಟ್ಟಿ ಹಾಗೂ ಪರೀಕ್ಷಿತ್‌ಗೆ ಮುಂದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!