ಐದು ವರ್ಷ ನಾನೇ ಸಿಎಂ, ನನ್ನಿಂದಲೇ ಬಜೆಟ್ ಮಂಡನೆ: ಸಿದ್ದರಾಮಯ್ಯ, ಬಜೆಟ್ ಮುನ್ನವೇ ಅಧಿಕಾರ ಹಸ್ತಾಂತರವಾಗಲಿ ಡಿಕೆ ಬಣ ಪಟ್ಟು
Views: 55
ಕನ್ನಡ ಕರಾವಳಿ ಸುದ್ದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಭೇಟಿ ಮಾಡುತ್ತೇನೆ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ. ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್ಕಾಗಿ ಉತ್ತರಿಸಿದರು.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ಭಾರೀ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಮೈಸೂರಿನಲ್ಲಿ ಈ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ
ಮುಂದಿನ ಬಜೆಟ್ ಕೂಡ ನಾನೇ ಮಂಡಿಸುತ್ತೇನೆ, ಐದು ವರ್ಷ ಪೂರ್ಣಾವಧಿ ನಾನೇ ಮುಗಿಸುತ್ತೇನೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ಸಚಿವ ಚಲುವರಾಯಸ್ವಾಮಿ ದೆಹಲಿಗೆ ಹೋಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ. ನಾನು ಕೂಡ ಮಾತನಾಡಿದ್ದೇನೆ. ನಾನು ಕೇಂದ್ರದ ಕೃಷಿ ಸಚಿವರನ್ನು ಭೇಟಿ ಮಾಡಲು ಹೋಗಿದ್ದೇನೆ ಎಂದು ಹೇಳಿದ್ದಾರೆ. ದೆಹಲಿಗೆ ಹೋಗಲೇಬಾರದು ಅಂತೇನಿಲ್ಲ. ಎಲ್ಲರೂ ಹೋಗಿ ಬರಲಿ. ನಾನು ಕೂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೇನೆ ಎಂದರು. ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೈ ಕಮಾಂಡ್ ಹೇಳಿದಕ್ಕೆ ನಾನು ಮಂತ್ರಿಗಳು ಎಲ್ಲರೂ ಬದ್ಧವಾಗಿರಬೇಕು. ಹೈ ಕಮಾಂಡ್ ಹೇಳಿದ್ದೇ ಫೈನಲ್ ಎಂದು ನುಡಿದರು.
ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಲೂ ನಾನು ಗ್ಯಾರೆಂಟಿ ವಿಚಾರದಲ್ಲಿ ಮಾತು ತಪ್ಪಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಬಜೆಟ್ ಗೆ ಮುನ್ನ ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರ ಆಗಿ ಬಿಡಲಿ ಎಂದು ಡಿಕೆ ಬಣ ಪಟ್ಟು ಹಿಡಿದಿದೆ ಈಗ ಅವಕಾಶ ಕೈ ತಪ್ಪಿದರೆ ಮುಂದೆ ಬಜೆಟ್ ಮಂಡನೆ ಸಿದ್ಧತೆಗಳು ನಡೆಯುತ್ತದೆ ನಾಯಕತ್ವ ಬದಲಾವಣೆ ಚರ್ಚೆ ನೇಪತ್ಯಕ್ಕೆ ಸರಿಯುತ್ತದೆ ಆದ್ದರಿಂದ ಇದು ಸಕಾಲ ಎಂಬ ನಿರ್ಧಾರ ಡಿಕೆ ಬಣದವರ ಅಭಿಪ್ರಾಯ
ಸದ್ಯ ತಲೆದೋರಿರುವ ಬಣ ರಾಜಕಾರಣ ತಡೆಯಲು ರಾಜ್ಯಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ ಈ ಸಮಸ್ಯೆ ಇಲ್ಲೇ ಬಗೆಹರಿಯುತ್ತದೆ ಎಂದು ಹೇಳಲಾಗದು. ಈ ಬಗ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಸಭೆ ನಡೆಯಲಿದ್ದು ಅಲ್ಲಿ ಕೈಗೊಳ್ಳುವ ತೀರ್ಮಾನವಷ್ಟೇ ನಾಯಕತ್ವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಅಲ್ಲಿಯವರೆಗೂ ಬಣ ರಾಜಕಾರಣ, ಸಚಿವರು, ಶಾಸಕರ ಹೇಳಿಕೆ ಗೊಂದಲ ಮುಂದುವರೆಯುವುದು ಸಹಜ ಎನ್ನುತ್ತಾರೆ ಪಕ್ಷದ ನಾಯಕರು






