ಎರಡೂವರೆ ವರ್ಷ ಸಿಎಂ ತೀರ್ಮಾನ ಆಗಿಲ್ಲ, ಈಗ ನಾನೇ ಸಿಎಂ, ಮುಂದೆಯೂ ನಾನೇ ಇರುತ್ತೇನೆ: ಸಿದ್ದರಾಮಯ್ಯ
Views: 51
ಕನ್ನಡ ಕರಾವಳಿ ಸುದ್ದಿ:ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎರಡೂವರೆ ವರ್ಷ ಮುಖ್ಯಮಂತ್ರಿ ಅಂತಾ ತೀರ್ಮಾನ ಆಗಿಲ್ಲ. ಇವಾಗ ನಾನು ಮುಖ್ಯಮಂತ್ರಿ ಆಗಿದ್ದೇನೆ, ಮುಂದೆಯೂ ನಾನೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ ಪುನರುಚ್ಚರಿಸಿದರು.
ಉತ್ತರ ಕರ್ನಾಟಕ ಕುರಿತ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತರಿಸುವಾಗ ನಾಯಕತ್ವ ಬದಲಾವಣೆ ವಿಚಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಸುನೀಲ್ ಕುಮಾರ್, ಮುನಿರತ್ನ ಸೇರಿದಂತೆ ಮತ್ತಿತರರು ಸಿದ್ದರಾಮಯ್ಯ ಅವರ ಕಾಲೆಳೆದರು. ಐದು ವರ್ಷ ನೀವೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿ ನೋಡೋಣ ಎಂದು ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು. ಈ ವೇಳೆ ಕೆಲಕಾಲ ಸ್ವಾರಸ್ಯಕರ ಚರ್ಚೆಯಾಯಿತು.
ಈಗಲೂ ನಾನೇ ಸಿಎಂ – ಹೈಕಮಾಂಡ್ ತೀರ್ಮಾನಕ್ಕೆ ಬದ್ದ- ಸಿದ್ದರಾಮಯ್ಯ; ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮೊದಲು ಜನರು ಆಶೀರ್ವಾದ ಮಾಡಬೇಕು. ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಆಯ್ಕೆ ಮಾಡಬೇಕು. ಆಮೇಲೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಹೇಳಿದ್ದೇನೆ. ಈಗಲೂ ನಾನೇ ಸಿಎಂ, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಸಿಎಂ ಎಂದು ಪುನರುಚ್ಚರಿಸಿದರು.
ಈ ವೇಳೆ ಆರ್.ಅಶೋಕ್ ಇನ್ನೂ ಎರಡೂವರೇ ವರ್ಷ ನೀವೇ ಮುಖ್ಯಮಂತ್ರಿ ಆಗಿರಬೇಕು ಎನ್ನುವುದನ್ನು ನಾವು ಬಯಸುತ್ತೇವೆ. ಆದರೆ, ಸಿಎಂ ಐದು ವರ್ಷ ಆಯ್ಕೆ ಮಾಡಿದ್ದೋ ಅಥವಾ ಎರಡುವರೆ ವರ್ಷಕ್ಕೋ ಎಂದು ಮರು ಪ್ರಶ್ನಿಸಿದರು. ಎರಡೂವರೆ ವರ್ಷ ಅಂತಾ ಹೇಳಿಲ್ಲ. ಎರಡೂವರೆ ವರ್ಷ ಸಿಎಂ ಎಂದು ತೀರ್ಮಾನ ಆಗಿಲ್ಲ. ಈಗ ನಾನೇ ಸಿಎಂ, ಮುಂದೆಯೂ ನಾನೇ ಇರುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಸಿದ್ದರಾಮಯ್ಯ ಹೇಳಿದರು.
ಇದರ ನಡುವೆ ಎದ್ದು ನಿಂತ ಮುನಿರತ್ನ, ಹಿಂದೆ ಸಿದ್ದರಾಮಯ್ಯ ಅವರು ಸವಾಲು ಹಾಕುವಾಗ ತೋಳು ತಟ್ಟುತ್ತಿದ್ದಿರಿ. ಈಗ ಅದೇ ರೀತಿ ತೋಳು ತಟ್ಟಿ, ನಾನೇ ಐದು ವರ್ಷಗಳ ಕಾಲ ಸಿಎಂ ಅಂತ ಹೇಳಿ. ಅದನ್ನು ನಾವು ಒಮ್ಮೆ ನೋಡಬೇಕು ಎಂದು ಕೀಚಾಯಿಸಿದರು.
ಆಗ ಆರ್. ಅಶೋಕ್ ಅವರು ಐದು ವರ್ಷ ವಿಪಕ್ಷ ನಾಯಕರಾಗಿ ಇರುತ್ತಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರಿಗೆ ಸುನೀಲ್ ಕುಮಾರ್, ಅಶೋಕ್ ಅವರೇ ಐದು ವರ್ಷ ವಿರೋಧ ಪಕ್ಷದ ನಾಯಕರು. ನೀವು ಹೇಳಿ ನಾನು ಐದು ವರ್ಷ ಸಿಎಂ ಅಂತಾ ಕಾಡಿಸಿದರು. ಹೀಗೆ ಕೆಲಕಾಲ ನಾಯಕತ್ವ ಬದಲಾವಣೆ ಕುರಿತು ನಾಯಕರ ಮಧ್ಯೆ ಸ್ವಾರಸ್ಯಕರ ಚರ್ಚೆ ಆಯಿತು.






