ಉಡುಪಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿಸಿದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

Views: 200
ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭವತಿಯನ್ನಾಗಿಸಿದ ಆರೋಪಿಯನ್ನು ‘ದೋಷಿ’ ಎಂದು ಘೋಷಿಸಿ, 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದ ದೋಷಿಯು ಮೂರು ಮಕ್ಕಳ ತಂದೆಯಾಗಿದ್ದು, ಬಾಲಕಿಯ ಸಂಬಂಧಿಯೂ ಆಗಿದ್ದಾನೆ. ಬಾಲಕಿಯ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ಎಸಗಿದ ಈತ ಈ ವಿಷಯವನ್ನು ಪೋಷಕರಿಗೆ ತಿಳಿಸಿದರೆ ಜೀವಕ್ಕೆ ತೊಂದರೆ ಮಾಡುವುದಾಗಿ ಬೆದರಿಸಿದ್ದ. ಹಲವು ಬಾರಿ ಸಂತ್ರಸ್ತೆ ಮೇಲೆ ದೌರ್ಜನ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.
2024ರ ಆಗಸ್ಟ್‌ನಲ್ಲಿ ನೊಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆ ಒಳಪಡಿಸಿದಾಗ ಗರ್ಭವತಿಯಾಗಿರುವುದು ತಿಳಿದು ಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಬೈಂದೂರು ಸಿಪಿಐ ಸವೀತ್ರಾ ತೇಜಾ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 27 ಸಾಕ್ಷಿಗಳ ಪೈಕಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್‌ಎ ವರದಿ ಆಧರಿಸಿ ಆರೋಪಿಯನ್ನು ‘ದೋಷಿ’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈಟಿ ರಾಘವೇಂದ್ರ ವಾದಿಸಿದ್ದಾರೆ.
ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗು 25 ಸಾವಿರ ರೂ. ದಂಡ ವಿಧಿಸಲಾಗಿದೆ. ಸರಕಾರದಿಂದ ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ.






