ಜನಮನ

ಇಂದಿನಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ, ಮನೆ-ಮನೆಗೆ ಭೇಟಿ ನೀಡಿದಾಗ ಮತದಾರರ ಪಾತ್ರವೇನು? 

Views: 106

ಕನ್ನಡ ಕರಾವಳಿ ಸುದ್ದಿ: ಜೂನ್ 30ರ ಮಂಗಳವಾರದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಅಂಗವಾಗಿ ಜೂನ್ 30ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ-ಮನೆಗೆ ಭೇಟಿ ನೀಡಿ ಗಣತಿ ಅರ್ಜಿಗಳನ್ನು ವಿತರಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಾರ್ವಜನಿಕರು ಸಹಕರಿಸುವಂತೆ ಚುನಾವಣಾಧಿಕಾರಿಗಳು  ಮನವಿ ಮಾಡಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಮನೆ-ಮನೆ ಭೇಟಿಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಹೇಶ್ವರ್ ರಾವ್ ಅವರು ಮಾತನಾಡಿದರು. ಮನೆ-ಮನೆ ಭೇಟಿ ಸಂದರ್ಭದಲ್ಲಿ ನಿವಾಸಿಗಳು ಲಭ್ಯವಿಲ್ಲದಿದ್ದರೆ ಬಿಎಲ್‌ಒಗಳು ಇನ್ನೆರಡು ಬಾರಿ ಭೇಟಿ ನೀಡಿ ಗಣತಿ ಅರ್ಜಿಗಳನ್ನು ವಿತರಿಸಲಿದ್ದಾರೆ. ಯಾವುದೇ ಮನೆ ಸಮೀಕ್ಷೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

ಶೇ.76.32ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣ:

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಚಟುವಟಿಕೆಯಾಗಿ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯದಲ್ಲಿ ಇದುವರೆಗೆ ಶೇ. 76.32ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 1,03,88,363 ಮತದಾರರಲ್ಲಿ 79,27,902 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಇನ್ನೂ 24,60,461 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಉಳಿದ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದು, ಸಂಜೆ ವೇಳೆಗೆ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳೊಂದಿಗೆ ತಮ್ಮ ನಿವಾಸದ ಇತ್ತೀಚಿನ ಛಾಯಾಚಿತ್ರವನ್ನು ಸಹ ಸಲ್ಲಿಸುವಂತೆ ಕೋರಲಾಗಿದೆ. ಅಲ್ಲದೆ, ಗಣತಿ ನಮೂನೆಗಳನ್ನು ವೋಟರ್ ಕಲೆಕ್ಷನ್ ಸೆಂಟರ್‌ಗಳಲ್ಲಿ ಹಾಗೂ ರಜಾದಿನಗಳಲ್ಲಿ ಮತಗಟ್ಟೆಗಳಲ್ಲಿ ಸಲ್ಲಿಸಬಹುದಾಗಿದೆ.

2,855 ಮತದಾರರ ಸಹಾಯ ಕೇಂದ್ರಗಳ ಸ್ಥಾಪನೆ: ಗಣತಿ ನಮೂನೆ ಭರ್ತಿ ಮಾಡುವ ವೇಳೆ ಅಥವಾ ಮತದಾರರ ನೋಂದಣಿಗೆ ಸಂಬಂಧಿಸಿದ ಯಾವುದೇ ಗೊಂದಲಗಳಿದ್ದಲ್ಲಿ ಮಾರ್ಗದರ್ಶನ ನೀಡಲು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ 2,855 ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ವಾರ್ಡ್ ಕಚೇರಿಗಳಲ್ಲಿ ಬಿಎಲ್‌ಒಗಳಿಗೆ ನೆರವಾಗುವ ಉದ್ದೇಶದಿಂದ 902 Facilitation Centres ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ರಜಾದಿನ ಹಾಗೂ ಸಂಜೆ ವೇಳೆಯಲ್ಲಿಯೂ ಬಿಎಲ್‌ಒಗಳ ಮೂಲಕ ಕಾರ್ಯ ನಿರ್ವಹಿಸುವುದು, ಮತದಾರರ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಅರ್ಜಿ ಭರ್ತಿ ಮಾಡುವಾಗ ದಾಖಲೆ ಬೇಕಿಲ್ಲ

ಮತದಾರರ ಮನೆಗೆ ಭೇಟಿ ಕೊಟ್ಟು ಗಣತಿ ನಮೂನೆಗಳನ್ನು ಭರ್ತಿ ಮಾಡಿಕೊಳ್ಳುವ ಈ ಜೂನ್ 30ರಿಂದ ಜುಲೈ 29ರ ಅವಧಿಯಲ್ಲಿ ಯಾರು ಯಾವುದೇ ದಾಖಲೆಗಳನ್ನು ಸಲ್ಲಿಸುವಂತಿಲ್ಲ. ಬಿಎಲ್ ಒಗಳು ಕೂಡ ಯಾವುದೇ ದಾಖಲೆ ಮತದಾರರಿಂದ ಪಡೆದುಕೊಳ್ಳುವಂತಿಲ್ಲ. ಹಾಗಾಗಿ ಅರ್ಜಿ ಭರ್ತಿಮಾಡುವ ಅವಧಿಯಲ್ಲಿ ಮತದಾರರು ಯಾವುದೇ ದಾಖಲೆಗಳನ್ನು ಬಿಎಲ್‌ಒಗಳಿಗೆ ಕೊಡಬೇಡಿ ಎಂದು ಮನವಿ ಮಾಡಿರುವ ಮುಖ್ಯ ಚುನಾವಣಾಧಿಕಾರಿಗಳು, ದಾಖಲೆ ತೋರಿಸುವ ಅಥವಾ ಹಾಜರುಪಡಿಸುವ ಹಂತ ಆಗಸ್ಟ್ 5ರ ಬಳಿಕವಷ್ಟೇ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಎಸ್ಐಆರ್ (SIR) ವೇಳಾಪಟ್ಟಿ:

* ಮನೆ-ಮನೆ ಭೇಟಿ: 30.06.2026 ರಿಂದ 29.07.2026

* ಮತಗಟ್ಟೆಗಳ ಮರುಹೊಂದಾಣಿಕೆ: 29.07.2026

* ಕರಡು ಮತದಾರರ ಪಟ್ಟಿ ಪ್ರಕಟಣೆ: 05.08.2026

* ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ: 05.08.2026 ರಿಂದ 04.09.2026

* ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ: 05.08.2026 ರಿಂದ 03.10.2026

* ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 07.10.2026

ಹೆಚ್ಚಿನ ಮಾಹಿತಿಗಾಗಿ: https://ceo.karnataka.gov.in/vfc/details ಭೇಟಿ ನೀಡಬಹುದು.

Related Articles

Back to top button
error: Content is protected !!