ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊರ ಬರಲಾಗದೇ ಟೆಕ್ಕಿ ಶರ್ಮಿಳಾ ದುರಂತ ಅಂತ್ಯ
Views: 122
ಕನ್ನಡ ಕರಾವಳಿ ಸುದ್ದಿ: ಉಸಿರುಗಟ್ಟಿ ಮಹಿಳಾ ಟೆಕ್ಕಿ ಜೀವ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಸುಬ್ರಮಣ್ಯ ಲೇಔಟ್ನಲ್ಲಿ ನಡೆದಿದೆ. ಶರ್ಮಿಳಾ (34) ಮೃತ ದುರ್ದೈವಿ
ಮೃತ ಶರ್ಮಿಳಾ ಮೂಲತಃ ಮಂಗಳೂರಿನವರು. ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಶರ್ಮಿಳಾ ಬೆಂಗಳೂರಿನ ಸುಬ್ರಮಣ್ಯ ಲೇಔಟ್ನಲ್ಲಿ ವಾಸವಿದ್ದರು. ಮಂಗಳೂರನಿಂದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದರು. ಕುಶಾಲಪ್ಪ ಅನ್ನೋರ ಮಗಳಾಗಿದ್ದಳು.
ಪೊಲೀಸ್ ಮೂಲಗಳ ಪ್ರಕಾರ, ಜನವರಿ 3 ರಂದು ದುರಂತ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 3 ರಂದು ರಾತ್ರಿ 10.30 ರ ಸುಮಾರಿಗೆ ಶರ್ಮಿಳಾ ವಾಸವಿದ್ದ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಶರ್ಮಿಳಾ ಮನೆ ಬಳಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮನೆಯ ಡೋರ್ ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ರೂಮ್ ಹಾಗೂ ಹಾಲ್ನಲ್ಲಿ ಬೆಂಕಿ ಬಿದ್ದು ಹೊಗೆ ತುಂಬಿಕೊಂಡಿತ್ತು. ಮನೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮನೆ ಪರಿಶೀಲನೆ ವೇಳೆ ಶರ್ಮಿಳಾ ಪ್ರಜ್ಞೆ ತಪ್ಪಿ ಬಿದಿರೋದು ಕಂಡುಬಂದಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷೆ ನಡೆಸಿದ್ದ ವೈದ್ಯರು ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಬೆಂಕಿ ಬಿದ್ದ ಪರಿಣಾಮ ರೂಮ್ ನಿಂದ ಹೊರ ಬರಲಾಗದೇ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರೋ ಶಂಕೆ ಇದೆ. ಆದರೂ ಪೊಲೀಸರು ತಮ್ಮದೇ ಆಯಾಮದಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೊಲೀಸ್ ತನಿಖೆ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ.






