ಸುಳ್ಯ: ಹೆಂಡತಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

Views: 104
ಕನ್ನಡ ಕರಾವಳಿ ಸುದ್ದಿ: ಹೆಂಡತಿಯನ್ನು ಗುಂಡಿಕ್ಕಿ ಕೊಂದ ಪತಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ, ಕೃಷಿಕ ರಾಮಚಂದ್ರ ಗೌಡ ಅಲಿಯಾಸ್ ಚಂದ್ರ (54) ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಪತ್ನಿ ವಿನೋದ (43) ಹತ್ಯೆಗೊಳಗಾದವರು.
ರಾಮಚಂದ್ರ ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಪತ್ನಿ ಹಾಗೂ ಪುತ್ರನೊಡನೆ ಜಗಳ ಆರಂಭಿಸಿದ್ದು, ಬಳಿಕ ಗಲಾಟೆ ವಿಪರೀತವಾಗಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗಲಾಟೆ ವೇಳೆ ರಾಮಚಂದ್ರ ಗನ್‌ನಿಂದ ಹಿರಿಯ ಮಗ ಪ್ರಶಾಂತ್ ಗೆ ಗುರಿಯಿಟ್ಟಿದ್ದು ಇದನ್ನು ತಪ್ಪಿಸಲು ವಿನೋದ ಕೋವಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ.
ಈ ವೇಳೆ ಪತ್ನಿಯ ಮೇಲೆ ಗುರಿಯಿರಿಸಿ ಗುಂಡಿಕ್ಕಿದ್ದು, ಘಟನೆಯಿಂದ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಪತ್ನಿ ಮೃತಪಟ್ಟ ಬಳಿಕ ಪತಿ ರಾಮಚಂದ್ರ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗ ಪ್ರಶಾಂತ್ ಈ ಕುರಿತಂತೆ ಹೇಳಿಕೆ ನೀಡಿದ್ದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






