ಸುಮಲತಾ ರೆಬೆಲ್ ಆಗ್ತಾರಾ?.. ಸೈಲೆಂಟ್ ಆಗ್ತಾರಾ?..ಜೆಡಿಎಸ್‌ಗೆ ಟ್ರಬಲ್ ಕೊಡುತ್ತಾರಾ ?..ಎಲ್ಲರ ಕಣ್ಣು ಮಂಡ್ಯದ ಮೇಲೆ…

Views: 74
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ಮೇಲೆ ಬಿಜೆಪಿ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಕಣ್ಣಿಟ್ಟಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಈಗ ಭಾರಿ ನಿರಾಸೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಎಂದು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಎಚ್ಚೆತ್ತ ಸುಮಲತಾ ಮಂಡ್ಯದಲ್ಲಿ ಮಾ.25 ಸೋಮವಾರ ಮುಖಂಡರ ಸಭೆ ಕರೆದಿದ್ದಾರೆ.
ಕಳೆದ ಬಾರಿಯೇ ಮಂಡ್ಯದಂತಹ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಿದ್ದ ಸುಮಲತಾ ಅವರು ಈ ಬಾರಿ ರೆಬೆಲ್ ಆಗುತ್ತಾರಾ? ಜೆಡಿಎಸ್‌ಗೆ ಟ್ರಬಲ್ ಕೊಡುತ್ತಾರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಯಾವುದಕ್ಕೂ ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ.
ಸಭೆಯಲ್ಲಿ ಆಪ್ತರೊಂದಿಗೆ ಚರ್ಚೆ ಮಾಡಿದ ನಂತರ ಮುಂದಿನ ನಿರ್ಧಾರದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇಲ್ಲಿ ಮೈತ್ರಿಗೆ ಸಪೋರ್ಟ್ ಮಾಡಬೇಕಾ? ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯಬೇಕಾ ಎಂಬುದನ್ನು ಸುಮಲತಾ ಅಂಬರೀಷ್ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಈಗಾಗಲೇ ದೆಹಲಿಗೆ ಪರೇಡ್ ನಡೆಸಿದ್ದ ಸುಮಲತಾ ಅಂಬರೀಶ್ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆ ಮಂಡಿಸಿದ್ದರು. ಆದರೆ, ಅಲ್ಲಿ ಅವರಿಗೆ ಯಾವ ಭರವಸೆ ಸಿಕ್ಕಿದೆ ಎಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಇದೆ. ಮುಂದಿನ ದಿನದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟ ಮಾಡುವುದಾಗಿ ಹೇಳಿದ್ದ ಸುಮಲತಾ, ತಾವು ಮಂಡ್ಯ ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ಈಗ ಎಲ್ಲವೂ ಉಲ್ಟಾ ಆಗಿದೆ.
ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾಗಿ ಬಿಜೆಪಿ ಕರ್ನಾಟಕ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಘೋಷಿಸಿದ್ದಾರೆ. ಇನ್ನು ಮಂಡ್ಯ ಲೋಕಸಭಾದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ. ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವ ಬಗ್ಗೆ ಸ್ವತಃ ಎಚ್‌ಡಿಕೆ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಜೆಡಿಎಸ್ ಟಿಕೆಟ್ ಸಿಗುವ ಬಗ್ಗೆ ಖಾತ್ರಿಯಾಗಿದೆ ಎನ್ನಲಾಗಿದೆ.