ಸರ್ಕಾರದ ಎಚ್ಚರಿಕೆಗೆ ಬಗ್ಗದ ಅತಿಥಿ ಉಪನ್ಯಾಸಕರು, ಸೇವೆ ಖಾಯಂಗೆ ತುಮಕೂರಿನಿಂದ ಪಾದಯಾತ್ರೆ

Views: 9
ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹೋರಾಟ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೆಡೆ ಅತಿಥಿ ಉಪನ್ಯಾಸಕರು ಸೇವೆ ಖಾಯಂಗೆ ಒತ್ತಾಯಿಸಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮತ್ತೊಂದೆಡೆ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗದಿದ್ದರೆ 2 ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಡಿ.29ರಂದು ಅತಿಥಿ ಉಪನ್ಯಾಸಕರಿಗೆ ಹೊಸ ಭರವಸೆಗಳನ್ನು ಘೋಷಿಸುವ ಜತೆಗೆ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಸೂಚನೆ ನೀಡಿದ್ದರು. ಆದರೆ, ಪಟ್ಟು ಬಿಡದ ಅತಿಥಿ ಉಪನ್ಯಾಸಕರು ಹೋರಾಟ ತೀವ್ರಗೊಳಿಸಲು ನಿರ್ಧರಿದ್ದು, ಸೋಮವಾರ ಪಾದಯಾತ್ರೆ ಆರಂಭಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪಾದಯಾತ್ರೆಗೆ ಹಸಿರು ನಿಶಾನೆ ತೋರಿದರು.
ರಾಜ್ಯಾದ್ಯಂತ 430 ಪದವಿ ಕಾಲೇಜುಗಳಲ್ಲಿ 9 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಸೋಮವಾರ 3,500ಕ್ಕೂ ಅಧಿಕ ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದವರು ಮಂಗಳವಾರ ತರಗತಿಗಳಿಗೆ ಬರುವ ನಿರೀಕ್ಷೆ ಇದೆ. ಒಂದು ವೇಳೆ ಹಾಜರಾಗದಿದ್ದರೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಿಎಂ ಜತೆ ರ್ಚಚಿಸಿ 2 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಅತಿಥಿ ಉಪನ್ಯಾಸಕರಾಗಲು 15 ಸಾವಿರಕ್ಕೂ ಹೆಚ್ಚಿನ ಮಂದಿ ಕಾಯುತ್ತಿದ್ದಾರೆ. ಅನಿವಾರ್ಯವಾಗಿ ಅವರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು
ಪಾದಯಾತ್ರೆ ಮುಂದುವರಿಕೆ
ಸಿದ್ಧಗಂಗಾ ಮಠದಿಂದ ಆರಂಭವಾಗಿರುವ ಪಾದಯಾತ್ರೆ ಸೋಮವಾರ ಸಂಜೆ ದಾಬಸ್ಪೇಟೆ ತಲುಪಿದೆ. ಮಂಗಳವಾರ ಬೆಳಗ್ಗೆ ದಾಬಸ್ಪೇಟೆಯಿಂದ-ನೆಲಮಂಗಲದವರೆಗೆ ಪಾದಯಾತ್ರೆ ಮುಂದುವರೆಯಲಿದೆ.
ಜ.3 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ತಲುಪಲಿದ್ದು, ಜ.4 ರಂದು ಬೃಹತ್ ಸಮಾವೇಶ ನಡೆಸಲು ತೀರ್ವನಿಸಿದ್ದಾರೆ.
ಸಭಾಪತಿ ಹೊರಟ್ಟಿ ನೈತಿಕ ಬೆಂಬಲ
ಅತಿಥಿ ಉಪನ್ಯಾಸಕರ ಪಾದಯಾತ್ರೆ ಕ್ಯಾತಸಂದ್ರದ ಜಾಸ್ಟೋಲ್ ಬಳಿ ತೆರಳುತ್ತಿದ್ದ ವೇಳೆ ಹುಬ್ಬಳ್ಳಿ ಕಡೆ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎದುರಾದರು. ಈ ಸಂದರ್ಭದಲ್ಲಿ ಹೋರಾಟಗಾರರಿಗೆ ನೈತಿಕ ಬೆಂಬಲ ಸೂಚಿಸಿದ ಅವರು, ಹೋರಾಟ ನ್ಯಾಯಯುತವಾಗಿದೆ. ನಿಮ್ಮ ಬೇಡಿಕೆಯನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದರು.
ಖಾಯಂ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೆಂಗಳೂರು ‘ಪಾದಯಾತ್ರೆ’ಯ ಆರಂಭದಲ್ಲೇ ಅತಿಥಿ ಉಪನ್ಯಾಸಕರಿಬ್ಬರು ಎದೆನೋವಿನಿಂದ ಅಸ್ವಸ್ಥರಾದರು. ಅಸ್ವಸ್ಥಗೊಂಡ ಚಂದ್ರಶೇಖರ್ ಹಾಗೂ ರಾಜೇಶ್ವರಿ ಎಂಬುವರಿಗೆ ಆಂಬುಲೆನ್ಸ್ನಲ್ಲೇ ಚಿಕಿತ್ಸೆ ನೀಡಲಾಯಿತು. ಹೋರಾಟದಲ್ಲಿ ಪ್ರಗತಿಪರ ಚಿಂತಕ ಕೆ. ದೊರೈರಾಜು, ಲೋಕೇಶ್ ತಾಳಿಕಟ್ಟೆ, ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ್, ಡಾ.ಮಲ್ಲಿಕಾರ್ಜುನ್, ಡಾ.ಶಿವಣ್ಣ ತಿಮ್ಲಾಪೂರ್, ಶಂಕರ್ ಹಾರೋಗೆರೆ ಸೇರಿ ಸಾವಿರಾರು ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.
—4ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಸಮಾವೇಶ
— ಪರ್ಯಾಯ ವ್ಯವಸ್ಥೆ ಅನಿವಾರ್ಯವೆಂದ ಸರ್ಕಾರ
— ಮುಖ್ಯಮಂತ್ರಿ ಜತೆ ರ್ಚಚಿಸಿ ಅಂತಿಮ ನಿರ್ಧಾರವೆಂದ ಸಚಿವ
ಅತಿಥಿ ಉಪನ್ಯಾಸಕರು ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರೆ. ಮೊದಲು 8 ತಿಂಗಳ ಇದ್ದ ವೇತನವನ್ನು 10 ತಿಂಗಳಿಗೆ ಮಾಡಿ ಎಂದರು. ಈಗ 12 ತಿಂಗಳಿಗೆ ಕೇಳುತ್ತಿದ್ದಾರೆ. ನಿಯಮಗಳ ಪ್ರಕಾರ ಸೇವೆ ಖಾಯಂ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಿ ವಿದ್ಯಾರ್ಥಿಗಳ ದೃಷ್ಟಿಯಿಂದ ಬುಧವಾರ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ.— ಡಾ. ಎಂ.ಸಿ. ಸುಧಾಕರ್ ಉನ್ನತ ಶಿಕ್ಷಣ ಸಚಿವ
ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾವಿರಾರು ಮಂದಿ ಅತಿಥಿ ಉಪನ್ಯಾಸಕರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಸಹಸ್ರಾರು ಮಕ್ಕಳಿಗೆ ಬೋಧನೆ ಮಾಡುವ ಉಪನ್ಯಾಸಕರು ಉತ್ತಮವಾಗಿ ಕಾರ್ಯನಿರ್ವಹಿಸಲು ಕೌಟುಂಬಿಕ ಮತ್ತು ವೈಯುಕ್ತಿಕ ಬದುಕು ಚೆನ್ನಾಗಿರಬೇಕು. ಹೀಗಾಗಿ, ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು.—- ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧೀಶ
ಸೇವಾ ಭದ್ರತೆ ಅಥವಾ ಸೇವೆ ಕಾಯಂ ಮಾಡುವುದು ಬಿಟ್ಟು ಸರ್ಕಾರ ಇಡಿಗಂಟು, ಪುಡಿಗಂಟು ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸುವ ತಂತ್ರ ಮಾಡುತ್ತಿದೆ. ಇದನ್ನು ವಿರೋಧಿಸಿ ಪಾದಯಾತ್ರೆ ಕೈಗೊಂಡಿದ್ದು, ಸೇವೆ ಖಾಯಂ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆ.—- ಹನುಮಂತಗೌಡ ಕಲ್ಮನಿ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ