ವಾಹನದಲ್ಲಿ ಕುಳಿತು ಮಧ್ಯಪಾನ ಮಾಡಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸುವ ಮದ್ಯವ್ಯಸನಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರಿಂದ ದೂರು

Views: 66
ಕುಂದಾಪುರ: ವಕ್ವಾಡಿ- ಗೋಪಾಡಿ ಸಾಗುವ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವಾಹನದಲ್ಲೇ ಕುಳಿತು ಮಧ್ಯಪಾನ ಮಾಡಿ ಗ್ರಾಮಸ್ಥರಿಗೆ ಭೀತಿ ಹುಟ್ಟಿಸುವ ಮದ್ಯವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಕ್ವಾಡಿ- ಗೋಪಾಡಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಗೋಪಾಡಿ ತಿರುವಿನಲ್ಲಿ ವಕ್ವಾಡಿ ಸಾಗುವ ದಾರಿಯಲ್ಲಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನಗಳನ್ನು ನಿಲ್ಲಿಸಿ ಮಧ್ಯಪಾನ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿರುವುದನ್ನು ಈ ಹಿಂದೆ ದೂರು ನೀಡಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಗೋಪಾಡಿ ಹಾಗೂ ವಕ್ವಾಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ಮಾರ್ಗದಲ್ಲಿ ಬಾಲಕಿಯರ ವಸತಿಗೃಹ, ದೇವಾಲಯ, ಶಾಲೆ, ವಸತಿ ಸಮುಚ್ಚಯ ಹೊಂದಿರುವ ಪ್ರದೇಶದಲ್ಲಿ ಮಧ್ಯ ವ್ಯಸನಗಳಿಂದ ಸಾರ್ವಜನಿಕ ಪ್ರದೇಶದಲ್ಲಿ ಶಾಂತಿ ಭಂಗ ಎಸಗುವುದು, ಇಲ್ಲಿನ ಜನರ ಭಯದ ವಾತಾವರಣದ ಜೊತೆಗೆ ಇನ್ನಿತರ ಅಹಿತಕರ ಚಟುವಟಿಕೆಗಳು ನಡೆಯುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಅಸಮಾಧಾನ ಉಂಟು ಮಾಡಿದೆ.