ವಾಡಿಕೆಗಿಂತ ಮುನ್ನವೇ ಮುಂಗಾರು ಪ್ರವೇಶ: ಒಂದು ವಾರ ಭಾರೀ ಮಳೆ ನಿರೀಕ್ಷೆ

Views: 64
ಕನ್ನಡ ಕರಾವಳಿ ಸುದ್ದಿ: ನೈಋುತ್ಯ ಮುಂಗಾರು ಮಳೆ ಶನಿವಾರ ಕೇರಳ ಮತ್ತು ಕರ್ನಾಟಕ ಕರಾವಳಿ ಪ್ರವೇಶಿಸಿದ್ದು, ಸುಮಾರು 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಾಡಿಕೆಗಿಂತ ಒಂದು ವಾರ ಮೊದಲೇ ಮುಂಗಾರು ಪ್ರವೇಶಿಸಿದೆ.
ಕೇರಳಕ್ಕೆ ಪ್ರವೇಶಿಸಿ 3-4 ದಿನಗಳಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದ ಮುಂಗಾರು, ಈ ಬಾರಿ ಒಂದೇ ದಿನದಲ್ಲೇ ಕರ್ನಾಟಕದ ಕರಾವಳಿಗೂ ತಲುಪಿದೆ. ಮೇ 26ರ ಒಳಗೆ ಕರ್ನಾಟಕದ ಇತರ ಪ್ರದೇಶಗಳಿಗೂ ವ್ಯಾಪಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಮತ್ತು ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.
2009ರಲ್ಲಿ ಮೇ 23ಕ್ಕೇ ಪ್ರವೇಶವಾಗಿತ್ತು. ಸಾಮಾನ್ಯವಾಗಿ ಜೂನ್ 1ರಂದು ನೈಋುತ್ಯ ಮಾರುತ ಕೇರಳ ಪ್ರವೇಶಿಸಿ, ಜುಲೈ 8ರ ಒಳಗೆ ದೇಶಾದ್ಯಂತ ವ್ಯಾಪಿಸುತ್ತದೆ.
ಕೇರಳದ ಕರಾವಳಿಯಲ್ಲಿ ಶುಕ್ರವಾರದಿಂದಲೇ ಭಾರಿ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಮುಂಗಾರು ಸಾಧಾರಣ ಮಟ್ಟದ ಮಳೆಯಿಂದ ಆರಂಭವಾಗುತ್ತದಾದರೂ, ಈ ಬಾರಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಕಳೆದ ವರ್ಷ ಮೇ 30ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಹಾಗೂ 2018ರಲ್ಲಿ ಮೇ 29ರಂದು ಪ್ರವೇಶಿಸಿತ್ತು.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆಯಾಗಲಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ಮೇ 25 ರಿಂದ ಮೇ 28ರವರೆಗೆ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಮೇ 29 ಮತ್ತು 30ರಂದು ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಮಲೆನಾಡಿನ ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾನುವಾರದಿಂದ ಮೇ 28ರವರೆಗೆ ರೆಡ್ ಅಲರ್ಟ್ ನೀಡಲಾಗಿದೆ.