ರೈತರ ಫಸಲನ್ನು ಭಕ್ತಿ ಭಾವದಿಂದ ಸಂಭ್ರಮದ ಸ್ವಾಗತ ಪೂಜೆಯೇ ‘ಹೊಸ್ತು’ ಆಚರಣೆ
ಕರಾವಳಿಯ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಆಚರಣೆ ಹೊಸ್ತು 'ಕೋರಲ್' ಎಂಬುವುದು ಕೋರಲ್ ಎಂಬ ತಮಿಳು ಪದದಿಂದ ಬಂದಿದೆ. ತುಳುನಾಡಿನಲ್ಲಿ' ಕೋರಲ್ ಪರ್ಬ' 'ತೆನೆ' ಎಂದು ಕರೆದರೆ ಕುಂದಾಪುರ ಕನ್ನಡದಲ್ಲಿ 'ಕದಿರು ಕಟ್ಟುವುದು' "ಹೊಸ್ತು" ಎಂದು ಕರೆಯುತ್ತಾರೆ.

Views: 10
ಜೂನ್ ತಿಂಗಳ ಮೊದಲಿಗೆ ಶುರುವಾದ ಮಳೆಗಾಲದಲ್ಲಿ ರೈತರು ಬೀಜ ಬಿತ್ತನೆ ಮಾಡುತ್ತಾರೆ.ಬೀಜಗಳು ಮೊಳೆತು ಸಾಹಿತಿಗಳಾದ ನಂತರ ಅದನ್ನು ಕಿತ್ತು ನಾಟಿ ಮಾಡುತ್ತಾರೆ.ನಂತರ ರೈತರು ಬೆಳೆದ ಫಸಲನ್ನು ಪೂಜೆ ಮಾಡಿ ಒಳಗೆ ತರುವಾಗ ಸಂಭ್ರಮದ ಭಕ್ತಿ ಭಾವದಿಂದ ಬರಮಾಡಿಕೊಳ್ಳುವ ಹೊಸ ಕದರಿಗೆ ಸ್ವಾಗತ ಪೂಜೆಯೇ ‘ಹೊಸ್ತು’
ಕರಾವಳಿಯ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಆಚರಣೆ ಹೊಸ್ತು ‘ಕೋರಲ್’ ಎಂಬುವುದು ಕೋರಲ್ ಎಂಬ ತಮಿಳು ಪದದಿಂದ ಬಂದಿದೆ. ತುಳುನಾಡಿನಲ್ಲಿ’ ಕೋರಲ್ ಪರ್ಬ’ ‘ತೆನೆ’ ಎಂದು ಕರೆದರೆ ಕುಂದಾಪುರ ಕನ್ನಡದಲ್ಲಿ ‘ಕದಿರು ಕಟ್ಟುವುದು’ “ಹೊಸ್ತು” ಎಂದು ಕರೆಯುತ್ತಾರೆ.
ಭೂಮಿ ತಾಯಿಗೆ ಗೌರವಿಸುವ ಮತ್ತು ಆಹಾರ ಧಾನ್ಯಗಳಿಗೆ ಮುಖ್ಯವಾಗಿ ಭತ್ತದ ಫಸಲಿಗೆ ಕೃತಜ್ಞತೆ ಸಲ್ಲಿಸುವ ಆಚರಣೆ. ಕ್ರೈಸ್ತರು ಸಹ ಇದನ್ನು ಸೆ.5 ರಂದು ಸಮಾನ ಉತ್ಸಾಹದಿಂದ ಆಚರಿಸುತ್ತಾರೆ.ಈ ಹಬ್ಬ ಆಚರಣೆಯನ್ನು ಅಲ್ಲಲ್ಲಿ ಪ್ರಾದೇಶಿಕತೆಯ ಅನುಗುಣವಾಗಿ ಆಚರಿಸುತ್ತಾರೆ.
ಕನ್ಯಾ ಮಾಸ ಶುಭಾರಂಭವಾಗುತ್ತಿದ್ದಂತೆಯೇ ಕರಾವಳಿ ಮತ್ತು ಮಲೆನಾಡಿನ ಮನೆ- ಮತ್ತು ಮನಗಳಲ್ಲಿ ‘ಹೊಸ್ತು’ ಆಚರಣೆ ಮಾಡುತ್ತಾರೆ.ಪಿತೃಪಕ್ಷ ಮುಗಿದ ಬಳಿಕ ನವರಾತ್ರಿ ಆರಂಭಕ್ಕೂ ಮುನ್ನ ಮನೆಯನ್ನು ವಾರದ ಹಿಂದೆಯೇ ಮನೆಯನ್ನು ಸ್ವಚ್ಛಗೊಳಿಸಿ, ಹೊಸ್ತಿನ ಹಬ್ಬದ ದಿನ ಮನೆಮಂದಿಯೆಲ್ಲ ಹೊಸ ಬಟ್ಟೆಯನ್ನು ತೊಡಬೇಕು.ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದ ನಂತರ ಶರನ್ನವರಾತ್ರಿಯ 9 ದಿನಗಳಲ್ಲಿ ಯಾವುದಾದರೂ ಒಂದು ದಿನ ಹೊಸ್ತು ಆಚರಣೆ ಮಾಡುತ್ತಾರೆ.
ಹೊಸ್ತಿಗೆ ಬೇಕಾದ ಭತ್ತದ ತೆನೆಯನ್ನು ತಮ್ಮ ಗದ್ದೆಯನ್ನು ಬಿಟ್ಟು ಬೇರೆಯವರ ಮನೆಯ ಗದ್ದೆಯಿಂದಲೇ ತರಬೇಕು. ಬೆಳಗಿನ ಜಾವದಲ್ಲಿ ಯಾರಿಗೂ ಕಾಣದಂತೆ ಭತ್ತದ ತನೆಯನ್ನು ಮನೆಯ ಎದುರು ಗದ್ದೆಯ ಬದಿಯಲ್ಲಿ ಎರಡು ಗೂಟವನ್ನು ಹುಗಿದು ಅದಕ್ಕೆ ಅಡ್ಡ ಕೋಲು ಹಾಕಿ ಭತ್ತದ ತೆನೆಯನ್ನು ನಿಲ್ಲಿಸಬೇಕು.
ಮನೆಯ ಯಜಮಾನ (ಅಳಿಯ ಕೂಡುಕಟ್ಟಿನಲ್ಲಿ ಮನೆಯ ಮಗನೇ ಕದಿರು ತರಬೇಕು) ಪಂಚೆ,ಶಾಲು, ಮುಂಡಾಸು ಕಟ್ಟಿಕೊಂಡು ದೊಡ್ಡ ಹರಿವಾಣದಲ್ಲಿ ಮಾವು, ಹಲಸಿನ ಎಲೆ ಮುಳ್ಳು ಸೌತೆ, ಬಿದಿರು ಕುಡಿ, ತೆಂಗಿನ ಸಾತ, ಹಣ್ಣು ಕಾಯಿ ಹಲ್ಕತ್ತಿಯೊಂದಿಗೆ ಹರಿವಾಣದಲ್ಲಿ ಸೇರಿಸಿಕೊಂಡು ಬೆಳಿಗ್ಗೆ ಸೂರ್ಯೋದಯದಲ್ಲಿ ಗದ್ದೆಗೆ ಹೋಗಿ ದೂಫ ಹಾಕಿ ಕದಿರು ಪೂಜೆ ಮಾಡಿ ಕದಿರನ್ನು ಕತ್ತರಿಸಿ ಹರಿವಾಣದಲ್ಲಿ ಹಾಕಿ ತಲೆಯ ಮೇಲೆ ಹೊತ್ತುಕೊಂಡು ಬರಬೇಕು.ನಂತರ ತುಳಸಿ ಕಟ್ಟೆಯಲ್ಲಿ ಇಳಿಸಿ ಅಲ್ಲಿ ಪೂಜೆ ಮಾಡಿದ ನಂತರ ಮತ್ತೆ ಅಲ್ಲಿಂದ ಹೊತ್ತುಕೊಂಡು ಮನೆಯಂಗಳಕ್ಕೆ ಬಂದಾಗ ಮನೆಯೊಡತಿ ರಂಗೋಲಿ ಹಾಕಿ ಅವರನ್ನು ಸ್ವಾಗತಿಸಲು ಯಜಮಾನನ ಕಾಲನ್ನು ತೊಳೆದು ಅಕ್ಷತೆ ಹಾಕಿ ನಮಸ್ಕರಿಸಿ ಕದಿರನ್ನು ಒಳಗೆ ತರುವಂತೆ ಬರಮಾಡಿಕೊಳ್ಳುತ್ತಾರೆ.ಮನೆಯೊಳಗೆ ಕದಿರನ್ನು ಮಣೆಯ ಮೇಲೆ ಇಟ್ಟು ಪೂಜೆ ಮಾಡಿ ನಂತರ ಚಾಪೆಯನ್ನು ಹಾಸಿ ಅದರ ಮೇಲೆ ಕುಳಿತುಕೊಂಡು ಈ ಎಲ್ಲಾ ಪರಿಕರಗಳನ್ನು ಇಟ್ಟುಕೊಂಡು ಕದಿರನ್ನು ಕ್ರಮಬದ್ಧವಾಗಿ ಕಟ್ಟುತ್ತಾರೆ.
ಹಲಸಿನ ಎಲೆ, ಮಾವಿನ ಎಲೆ, ಬಿದಿರಿನ ಕುಡಿ, ಒಂದು ಕದಿರನ್ನು ಸೇರಿಸಿ ತೆಂಗಿನ ಸಾಂತದಿಂದ ಕಟ್ಟಲಾಗುತ್ತದೆ.ತಯಾರಾದ ಕದಿರನ್ನು ಕೃಷಿ ಸಾಮಗ್ರಿಗಳಾದ ನೇಗಿಲು, ನೊಗ ಮೇಟಿಕಂಬ, ಸೇರು, ಪಾವು, ಪತ್ತಾಸು, ಅಕ್ಕಿಮುಡಿ, ಭತ್ತ ಎಳೆಯುವ ಗೋರಿ,ಭತ್ತ ಅಳೆಯುವ ಕಳಸಿಗೆ, ಗೊಬ್ಬರ ತೆಗೆಯುವ ತೊಡ್ಕು, ಹಡಿಮಂಚ, ಹಾರಿ ,ಪಿಕಾಸು, ಜೊತೆಗೆ ದೇವರು ಕೋಣೆ, ತುಳಿಸಿ ಕಟ್ಟೆ, ಮನೆಯ ಮಹದ್ವಾರ ಮತ್ತು ಅಡಿಕೆ ಮರ ತೆಂಗಿನ ಮರ, ಮಾವು, ಹಲಸಿನ ಮರ ಬಾವಿಕಟ್ಟೆಗೆ, ವಾಹನಗಳಿಗೆ ಕದಿರನ್ನು ಕಟ್ಟುತ್ತಾರೆ.
ಹಾಗೆಯೇ ಭತ್ತದ ಪೈರಿನ 9 ಭತ್ತವನ್ನು ಸುಲಿದು ಅಕ್ಕಿಯನ್ನು ತೆಗೆದು ನಂತರ ಅನ್ನಕ್ಕೆ ಸೇರಿಸಿ ಹೊಸ್ತಿನ ಗಂಜಿ ಮಾಡುವ ಕ್ರಮ ಇದೆ.ಹೊಸ್ತಿನ ದಿನ ಹೊಸ್ತಿನ ಗಂಜಿಯೇ ಮುಖ್ಯವಾದದ್ದು ಮನೆಯ ಹೊಸ್ತು ಆಗದೆ ಬೇರೆಯವರ ಮನೆಯ ಹೊಸ್ತು ಊಟ ಮಾಡಬಾರದು ಎಂಬ ಕ್ರಮ ಇದೆ.
ಗದ್ದೆ ಇಲ್ಲದ ಮನೆಯವರು ಊರಿನ ದೇವಸ್ಥಾನದಲ್ಲಿ ಕೊಡುವ ಕದಿರನ್ನು ಮನೆಗೆ ತಂದು ಕಟ್ಟುತ್ತಾರೆ.ಮದುವೆಯಾದ ಜೋಡಿಗಳಿಗೆ ಹೆಣ್ಣಿನ ಮನೆಯವರ ಕಡೆಯಿಂದ ಗಂಡನ ಮನೆಗೆ ವಿವಿಧ ರೀತಿಯ ತಿಂಡಿ ತಿನಿಸು ಸೇರಿದಂತೆ ಉಡುಗೊರೆ, ಹೊರೆ ನೀಡುವ ಪದ್ಧತಿ ರೂಡಿಯಲ್ಲಿದೆ. ನವ ಜೋಡಿಗಳಿದ್ದರೆ ಮನೆಯಲ್ಲಿ ಮದುವೆ ಹೊಸ್ತು ಎಂಬುದೇ ದೊಡ್ಡ ವಿಶೇಷ.ಅಡುಗೆಯಲ್ಲಿ 9 ಬಗೆಯ ಪಲ್ಯ, ಪಾಯಸ, ಹೊಸ್ತಿನ ಗಂಜಿ ಮಾಡಿ ನಂತರ ಎಲ್ಲಾ ಪಾತ್ರೆಗಳಿಗೆ ಶೇಡಿಯಿಂದ ಬರೆದು ಮೀಸಲು ಹಾಕಿ ಹೊಸ್ತಿನ ಊಟ ಮಾಡುವಾಗ ಹಿರಿಯವರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದು ನಾನು ಹೊಸ್ತು ಊಟ ಮಾಡುತ್ತೇನೆಂದು ಹೇಳಬೇಕು. ಮುತ್ತೈದೆಯವರು ಅವರ ಗಂಡನ ಮನೆಯಲ್ಲಿಯೇ ಹೊಸ್ತು ಊಟ ಮಾಡಬೇಕು ಎನ್ನುವುದು ಇಲ್ಲಿನ ಪದ್ದತಿಯಾಗಿದೆ.
ಚೌತಿ ಹಬ್ಬದ ಸಂದರ್ಭದಲ್ಲಿ ಹೊಟ್ಟೆ ತುಂಬ ಊಟ ಮಾಡಬೇಕು ಅರ್ಧ ಹೊಟ್ಟೆಯಲ್ಲಿರಬಾರದು ಹಾಗೇನಾದರೂ ಆದಲ್ಲಿ ಗದ್ದೆಯಲ್ಲಿ ಭತ್ತ ಚೆಟ್ಟು ಬರುತ್ತದೆ ಎಂಬ ನಂಬಿಕೆ.ಹೀಗೆ ಸಂತೋಷದಿಂದ ಹೊಸ್ತು ಊಟ ಮಾಡಿದರೆ ರೈತರ ಫಸಲು ಇನ್ನಷ್ಟು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.
ಊಟ ಮಾಡಿದ ಮೇಲೆ ಅಡಿಕೆ ವೀಳ್ಯದೆಲೆ ಹಾಕಿಕೊಂಡು ಒಂದು ಸುತ್ತು ಗದ್ದೆಯತ್ತ ಕಣ್ಣಾಡಿಸಿ ತಿರುಗಾಡಿದಾಗ ಹೊಸ್ತಿಗೆ ಪರಿಪೂರ್ಣ ಸಿಗುವುದು ಎಂಬುವುದು ಹಿರಿಯರ ನಂಬಿಕೆಯಾಗಿದೆ.
ಅದೇ ದಿನ ಸಂಜೆ ಹೊಸ ಅಕ್ಕಿಯನ್ನು ಬಾಗುವುದು ಮತ್ತು ಗೊಡ್ಡು ಹಿಟ್ಟು ಮಾಡಿ ತಿನ್ನಬೇಕು. ನಂತರ ಸಂಜೆ ಅದೇ ಕಡಬಿನಿಂದ ಗುದ್ದಾಟ ಮಾಡಿಕೊಳ್ಳುತ್ತಾರೆ.