ಯೂಟ್ಯೂಬ್ ನೋಡಿ ಕಳ್ಳತನ ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಮನೆಗಳ್ಳನ ಸೆರೆ

Views: 99
ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ವಯಸ್ಸಿನಿಂದಲೇ ಕಳ್ಳತನ ಆರಂಭಿಸಿದ್ದ ನಗರದ ಮೋಸ್ಟ್ ವಾಂಟೆಡ್ ಮನೆಗಳ್ಳನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಜಾಲದಿಂದ ತಪ್ಪಿಸಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡಿದ್ದ ಖದೀಮ ಪ್ರಕಾಶ್ ಅಲಿಯಾಸ್ ಬಾಲಾಜಿ(43) ಅತ್ತಿಬೆಲೆಯ ಆತನ ನಿವಾಸದಲ್ಲಿ ಬಂಧಿಸಲಾಗಿದೆ.
ಆತನಿಂದ 779 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿಯ ವಸ್ತುಗಳು, 2 ದ್ವಿಚಕ್ರ ವಾಹನ ವಶಪಡಿಸಿ. ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2001ರಿಂದಲೇ ಅಪರಾಧ ಕೃತ್ಯಗಳನ್ನು ಆರಂಭಿಸಿದ್ದ ಆರೋಪಿ, ಚಿಂದಿ ಆಯುವ ಕೆಲಸದ ಜತೆಗೆ ಮನೆಗಳ್ಳತನ ಆರಂಭಿಸಿದ್ದ. ಮಾರಾಟಕ್ಕೆ ಸಿದ್ಧವಾಗಿರುವ ಮನೆ, ಅಪಾರ್ಟ್ ಮೆಂಟ್ ಗಳಿಗೆ ಖರೀದಿದಾರನಂತೆ ವಿಚಾರಿಸುವ ನೆಪದಲ್ಲಿ ಹೋಗುತ್ತಿದ್ದ ಆರೋಪಿ ಬೀಗದ ಕೀಗಳ ಮಾಡ್ಯೂಲ್ ಅನ್ನು ನಕಲು ಮಾಡಿಕೊಳ್ಳುತ್ತಿದ್ದ.
ಆರೋಪಿಯ ಬಂಧನದಿಂದ ಮಡಿವಾಳ, ಹುಳಿ ಮಾವು ಠಾಣೆಗಳಲ್ಲಿ ತಲಾ 3 ಪ್ರಕರಣ, ಮೈಕೋ ಲೇಔಟ್, ಬಂಡೆಪಾಳ್ಯ, ಸುಬ್ರಹ್ಮಣ್ಯಪುರ, ಎಚ್.ಎಸ್ ಆರ್ ಬೇಔಟ್, ಆರ್.ಆರ್. ನಗರ, ಬೇಗೂರು ಠಾಣೆ ಗಳಲ್ಲಿ ತಲಾ ಒಂದೊಂದು ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪ್ರಕಾಶ್ ಜತೆಗೆ ರಾಜೀವ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ಈವರೆಗೆ ಬರೋಬ್ಬರಿ 140 ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಬಳಿ ಇರಿಸಿ ಹೋಗುವ ಬೀಗಗಳ ಮಾಡ್ಯೂಲ್ ಪಡೆದುಕೊಂಡು ಬರುತ್ತಿದ್ದ. ನಂತರ ಆ ಕೀಗಳ ಡ್ಯೂಪ್ಲಿಕೇಟ್ ತಯಾರಿಸಿಕೊಂಡು ಐದಾರು ತಿಂಗಳುಗಳ ಬಳಿಕ ಸುಲಭವಾಗಿ ಕಳ್ಳತನ ಮಾಡುತ್ತಿದ್ದ, ಮಹಿಳೆಯರಿರುವ ಕಡೆ ಚಿನ್ನಾಭರಣ ಇರುತ್ತದೆ ಎಂದು ಹೆಚ್ಚಾಗಿ ಮಹಿಳಾ ಚಪ್ಪಲಿಗಳಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕಳ್ಳತನ ಮಾಡಲು ಹೋಗುವಾಗ ಇ-ಕಾಮರ್ಸ್ ಕಂಪನಿಗಳ ಯೂನಿಫಾರ್ಮ್, ಬ್ಯಾಗ್ ಧರಿಸುತ್ತಿದ್ದ ಆರೋಪಿ, ಹೆಚ್ಚಾಗಿ ಇತರರ ಅನುಮಾನದಿಂದ ಪಾರಾಗುತ್ತಿದ್ದ. ಕದ್ದ ಮಾಲನ್ನು ಮಾರಾಟ ಮಾಡಿ ಬಂದ ಹಣವನ್ನು ಬೆಟ್ಟಿಂಗ್, ಮದ್ಯ ಪಾನ, ಮಾದಕ ಮತ್ತಿತರ ಚಟಗಳಿಗೆ ಬಳಸಿಕೊಳ್ಳುತ್ತಿದ್ದ. ಪದೇ ಪದೇ ಬಂಧನವಾದ ಬಳಿಕ ಆರೋಪಿಯ ದಾಖಲಾತಿಗಳೆಲ್ಲವನ್ನೂ ಪೊಲೀಸರು ಕಪ್ಪುಪಟ್ಟಿಗೆ ಸೇರಿಸಿದ್ದರು. ಆದ್ದರಿಂದ ತಾನು ಗಿರವಿ ಇಡಲು ಸಾಧ್ಯವಾಗದಿದ್ದಾಗ ರಾಜೀವ್ ಎಂಬಾತನ ಮೂಲಕ ಕದ್ದ ಮಾಲನ್ನು ಮಾರಾಟ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ.