ಮಾ.27ರಂದು ಧರ್ಮಸ್ಥಳದ ಮಾನಹಾನಿ ಮಾಡುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಪ್ರತಿಭಟನಾ ಸಭೆ

Views: 72
ಕನ್ನಡ ಕರಾವಳಿ ಸುದ್ದಿ: ಸುಳ್ಳು ಆರೋಪ ಹೊರಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮಾನಹಾನಿ ಮಾಡುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಆಗ್ರಹಿಸಿ ಮಾ.27ರಂದು ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.ಎಂದು ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೇಶವ ಬೆಳಾಲು ಹೇಳಿದರು.
ಕನ್ಯಾಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಮ್ಮ ಗ್ರಾಮ, ನಮ್ಮ ಕ್ಷೇತ್ರದ ಗೌರವ, ಘನತೆ ಉಳಿಸುವಲ್ಲಿ ಬದ್ಧರಾಗಿದ್ದೇವೆ. ಕಳೆದ ಕೆಲ ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಅವಹೇಳನಕಾರಿಯಾದ ಆಧಾರರಹಿತ ಮಾಹಿತಿಗಳು ಹರಿದಾಡುತ್ತಿದ್ದು, ಇದರಿಂದ ನಮ್ಮ ಗ್ರಾಮದ ಘನತೆಗೆ ಹಾನಿಯಾಗಿದೆ. ಇಲ್ಲಿ ಮುಖ್ಯವಾಗಿ ಸೌಜನ್ಯಾ ಪ್ರಕರಣ ಮುಂದಿರಿಸಿ, ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ. ಸೌಜನ್ಯಾ ಪ್ರಕರಣಕ್ಕೂ, ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸೌಜನ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಧರ್ಮಸ್ಥಳ ಗ್ರಾಮದ ನಿವಾಸಿಗರು ಆರಂಭದಿಂದಲೂ ಆಗ್ರಹಿಸುತ್ತಾ ಬಂದಿದ್ದೇವೆ.
ಆದರೆ ಇದೇ ವಿಚಾರ ಮುಂದಿಟ್ಟು ಸಂವಿಧಾನ ಬಾಹಿರವಾಗಿ ಕ್ಷೇತ್ರದ ತೇಜೋವಧೆ ಮಾಡುವುದನ್ನು ಖಂಡಿಸುತ್ತೇವೆ ಎಂದರು.
ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಮನಬಂದಂತೆ ಮಾತನಾಡಿ, ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಮೂಲಕ ಧರ್ಮಸ್ಥಳ ಗ್ರಾಮದ ನಿವಾಸಿಗಳಿಗೆ ಮುಜುಗರ ತರುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧವೂ ಅಗತ್ಯ ಕಾನೂನು ಕ್ರಮವಾಗಬೇಕು. ಸರಕಾರದ ಮುಂದೆ ಈ ಆಗ್ರಹ ಮುಂದಿರಿಸಿ ಒಂದು ದಿನದ ಹರತಾಳ ಮತ್ತು ಪ್ರತಿಭಟನಾ ಸಭೆ ನಡೆಸಲಿದ್ದೇವೆ ಎಂದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಧನಕೀರ್ತಿ ಆರಿಗ, ಕೋಶಾಧಿಕಾರಿ ಶ್ರೀನಿವಾಸ್ ರಾವ್, ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ವಿಮಲಾ, ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಂ ಡಿ., ಉಪಾಧ್ಯಕ್ಷ ಅಜಿತ್ ಜೈನ್, ವರ್ತಕರ ಸಂಘದ ಪ್ರತಿನಿಧಿ ಭವಾನಿ ಶಂಕರ್ ರಾವ್, ವಾಹನ ಮಾಲೀಕ ಚಾಲಕ ಸಂಘದ ಪ್ರತಿನಿಧಿ ನೀಲಕಂಠ ಶೆಟ್ಟಿ ಯುವ ಉದ್ಯಮಿಗಳಾದ ಅಖಿಲೇಶ್, ಶೃತಾಂಜನ್ ಜೈನ್ ಉಪಸ್ಥಿತರಿದ್ದರು.