ಮಗುವನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಗಂಭೀರ

Views: 113
ಬೆಂಗಳೂರು,-ಪತಿ ಜೊತೆ ಜಗಳ ಹಾಗೂ ಅನಾರೋಗ್ಯ ಕಾರಣದಿಂದ ನೊಂದ ವಿದ್ಯಾವಂತ ತಾಯಿ ತನ್ನ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಕೆಆರ್ ಪುರಂನ ಸೀಗೇಹಳ್ಳಿಯಲ್ಲಿ ನಡೆದಿದೆ.
ಸೀಗೇಹಳ್ಳಿಯಲ್ಲಿಯ ಚಿನ್ನಾ (24) ಅವರು ತನ್ನ ಎರಡು ವರ್ಷದ ಮಗು ಶೃತಿಕಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಆತ್ಮಹತ್ಯೆ ಯತ್ನ ನಡೆಸಿ ಅಸ್ವಸ್ಥಗೊಂಡ ಚಿನ್ನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.
ಆಂಧ್ರಪ್ರದೇಶದಿಂದ ಕೆಲಸಕ್ಕಾಗಿ ಬಂದು ಕೆಆರ್ ಪುರಂನ ಸೀಗೇಹಳ್ಳಿಯಲ್ಲಿ ವಾಸವಿದ್ದ ಕುಟುಂಬದಲ್ಲಿ ಪತ್ನಿಗೆ ಮದುವೆಗೂ ಮೊದಲಿನಿಂದಲೇ ಅನಾರೋಗ್ಯವಿತ್ತು. ಆದರೆ, ಕೋವಿಡ್ ಅವಧಿಯಲ್ಲಿ ಪತಿ ಮನವೊಲಿಕೆ ಮಾಡಿ ಸಂಸಾರ ಮಾಡಿದ್ದು ಮಗು ಕೂಡ ಜನಿಸಿದೆ. ಆದರೆ, ಮಗುವನ್ನು ಮೊದಲಿನಿಂದಲೂ ಪತ್ನಿ ಇಷ್ಟಪಡುತ್ತಿರಲಿಲ್ಲ. ಇನ್ನು ಮೂರು ವರ್ಷಗಳ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಾ ಪತಿ ಊರಲ್ಲಿದ್ದರಿಂದ, ಮನೆಯವರೇ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ, 2023ರ ಡಿಸೆಂಬರ್‌ನಲ್ಲಿ ವರ್ಕ್‌ಫ್ರಮ್ ಹೋಮ್ ಕೆಲಸ ಪೂರ್ಣಗೊಂಡಿದ್ದು, ಕಚೇರಿಗೆ ಬಂದು ಕೆಲಸ ಮಾಡುವಂತೆ ಕಂಪನಿಯಿಂದ ತಿಳಿಸಲಾಗಿದೆ.
ಇದರಿಂದ ಪತಿ ಲಕ್ಷ್ಮೀನಾರಾಯಣ, ಪತ್ನಿ ಚಿನ್ನಾ ಹಾಗೂ 2 ವರ್ಷದ ಮಗಳು ಶೃತಿಕಾ ಕುಟುಂಬದವರು ಸೀಗೆಹಳ್ಳಿಯಲ್ಲಿ ವಾಸವಿದ್ದರು. ಇನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿ ಈ ದರಿದ್ರ ಮಗುವನ್ನು ನೋಡಿಕೊಳ್ಳಲಾಗುವುದಿಲ್ಲ. ಇದನ್ನು ನಾನೇ ಸಾಯಿಸುತ್ತೇನೆ ಎಂದು ಹೇಳುತ್ತಿದ್ದಳಂತೆ. ಪತಿ ಸಮಾಧಾನ ಮಾಡಿ ಪತ್ನಿಗೆ ಬುದ್ಧಿ ಹೇಳುತ್ತಿದ್ದನಂತೆ, ಕೆಲಸದ ಒತ್ತೆ ಹೆಚ್ಚಾದಾಗ ಸಮಾಧಾನದಿಂದ ಬುದ್ಧಿ ಹೇಳದೇ ಪತ್ನಿಯೊಂದಿಗೆ ಜಗಳವನ್ನೂ ಮಾಡಿದ್ದಾನೆ. ಅದೇ ರೀತಿ ಮಾ.16ರ ರಾತ್ರಿಯೂ ಕೂಡ ಗಂಡ-ಹೆಂಡತಿ ನಡುವೆ ಜಗಳ ಆಗಿದೆ. ಇಬ್ಬರೂ ಸಮಾಧಾನವಾದ ನಂತರ, ಪತಿ ನಾವಿಬ್ಬರೂ ದೇವಸ್ಥಾನಕ್ಕೆ ಹೋಗಿಬರೋಣವೆಂದು ರಾತ್ರಿ 10 ಗಂಟೆ ಸುಮಾರಿಗೆ ಕರೆದಿದ್ದಾನೆ. ಈಗ ಬೇಡ ನಾಳೆ ಬೆಳಗ್ಗೆ ಹೋಗೋಣ ಎಂದು ಪತ್ನಿ ಹೇಳಿದ್ದಾಳೆ. ಇನ್ನು ಬೆಳಗ್ಗೆ ೬ ಗಂಟೆಗೆ ಎದ್ದು ದೇವಸ್ಥಾನಕ್ಕೆ ಹೋಗೋಣವೆಂದು ಪತಿ ಕರೆದರೆ, ತನಗೆ ಹೊಟ್ಟೆ ನೋವಿದೆ ನೀವೊಬ್ಬರೇ ಹೋಗಿಬನ್ನಿ ಎಂದು ಹೇಳಿದ್ದಾಳೆ.
ಇದರಿಂದ ಪತಿಯೇ ಮುನೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ಮಾ.17ರ ಬೆಳಗ್ಗೆ ಪತಿ ದೇವಸ್ಥಾನದಲ್ಲಿರುವಾಗ ಪತ್ನಿ ಊರಿಗೆ ಕರೆ ಮಾಡಿ ನಾನು ಮಗುವನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ತಾಯಿಗೆ ಕರೆ ಮಾಡಿ ಹೇಳಿದ್ದಾಳೆ. ಇದರಿಂದ ಆಂಧ್ರಪ್ರದೇಶದಲ್ಲಿದ್ದ ಪತ್ನಿಯ ತಾಯಿ ಅತ್ತೆಯ ಬೇರೊಬ್ಬರ ಫೋನಿನಿಂದ ಕರೆ ಮಾಡಿ ಪತ್ನಿ ಹೇಳಿದ ವಿಚಾರ ತಿಳಿಸಿದ್ದಾರೆ.
ಪತ್ನಿ ಅನಾಹುತ ಮಾಡಿಕೊಳ್ಳುತ್ತಾಳೆ ಎಂಬ ಗಾಬರಿಯಿಂದ ಪತಿ ದೇವಸ್ಥಾನದಲ್ಲಿರುವಾಗಲೇ ಪಕ್ಕದ ಮನೆಯವರಿಗೆ ಕರೆ ಮಾಡಿ ಮನೆಯಲ್ಲಿ ನೋಡುವಂತೆ ತಿಳಿಸಿದ್ದಾರೆ. ಆಗ ಮನೆಗೆ ಬಂದ ಪತಿಯ ಸ್ನೇಹಿತ ಕಿಟಕಿಯಲ್ಲಿ ನೋಡಿದಾಗ ಹಾಲ್‌ನಲ್ಲಿ ರಕ್ತ ಬಿದ್ದಿರುವುದು ಕಂಡಿದೆ. ಕೂಡಲೇ, ಅಕ್ಕಪಕ್ಕದವರನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ ತಾಯಿ ಮಗು ಇಬ್ಬರೂ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಆಗ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇವಸ್ಥಾನದಿಂದ ಟ್ರಾಫಿಕ್‌ನಲ್ಲಿ ವಾಪಸ್ ಬರುವಷ್ಟರಲ್ಲಿ ತಡವಾಗಿದ್ದರಿಂದ ಸೀದಾ ಆಸ್ಪತ್ರೆಗೆ ಗಂಡ ಬಂದು ನೋಡಿದಾಗ ಮಗು ಆಗಲೇ ಮೃತಪಟ್ಟಿತ್ತು. ಇನ್ನು ಪತ್ನಿ ಚಿನ್ನಾಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಂಡ ಲಕ್ಷ್ಮೀನಾರಾಯಣ ಸ್ಥಳೀಯ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆತನ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.