ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

Views: 174
ಕನ್ನಡ ಕರಾವಳಿ ಸುದ್ದಿ: ಮಹಿಂದ್ರಾ ಪಿಕಪ್ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ ಒಂದೇ ಕುಟುಂಬದ ಮೂವರು ಹಾಗೂ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಇಂದು ನಸುಕಿನಲ್ಲಿ ಸಂಭವಿಸಿದೆ.
ಹೈದರಾಬಾದ್ ನಗರದ ನಿವಾಸಿಗಳಾದ ಭಾರ್ಗವ ಕೃಷ್ಣ (55), ಪತ್ನಿ ಸಂಗೀತಾ (45), ಪುತ್ರ ಉತ್ತಮ ರಾಘವನ್ (28) ಹಾಗೂ ಕಾರಿನ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೈದರಾಬಾದ್‌ನಿಂದ ಶ್ರೀಕ್ಷೇತ್ರ ದೇವಲ ಗಾಣಗಾಪುರದ ದತ್ತನ ದರ್ಶನಕ್ಕೆ ಹೊರಟಿದ್ದ ಕುಟುಂಬ ಮಾರ್ಗ ಮಧ್ಯೆಯೇ ದುರಂತ ಸಾವಿಗೆ ಬಲಿಯಾಗಿದೆ.
ಕಾರಿನ ಚಾಲಕ ಮುಂದೆ ಹೊರಟಿದ್ದ ವಾಹನ ಓವರ್ ಟೇಕ್ ಮಾಡುತ್ತಿದ್ದ ವೇಳೆ ಎದುರಿನಿಂದ ಬಂದ ಪಿಕಪ್ ಕಾರಿಗೆ ಅಪ್ಪಳಿಸಿದೆ. ಹೀಗಾಗಿ ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.