ವಿದೇಶಿ ಶೈಲಿ ಪ್ರೇಮ ನಿವೇದನೆ ನೆಪದಲ್ಲಿ ಪ್ರಿಯಕರ ಸಜೀವ ದಹನ
Views: 70
ಕನ್ನಡ ಕರಾವಳಿ ಸುದ್ದಿ: ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ಹೇಳಿ ಯುವತಿಯೊಬ್ಬಳು ಪ್ರಿಯಕರನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳಿಗೆ ಹಗ್ಗ ಕಟ್ಟಿ, ಅರೆಬೆತ್ತಲೆಗೊಳಿಸಿ ಬಳಿಕ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಭೀಕರ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಈ ಸಂಬಂಧ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಕಿರಣ್ (27) ಸಜೀವ ದಹನವಾದ ಯುವಕ. ಪ್ರಿಯಕರನನ್ನು ಹತ್ಯೆಗೈದ ಆರೋಪದಡಿ ಯುವತಿ ಪ್ರೇಮಾ ಎಂಬಾಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ತುಮಕೂರಿನ ಚಿಕ್ಕನಾಯಕಹಳ್ಳಿಯ ಕಿರಣ್ ನಗರದಲ್ಲಿ ವಾಸವಾಗಿದ್ದು, ರಾಜಾಜಿನಗರದ ವಿಐ ಸ್ಟೋರ್ನಲ್ಲಿ ಸಿಮ್ ಮಾರಾಟ ಕೆಲಸ ಮಾಡುತ್ತಿದ್ದ. ಇದೇ ಕಂಪೆನಿಯಲ್ಲಿ ಯುವತಿ ಪ್ರೇಮಾ ಸಹ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳ ಪರಿಚಯ ಕ್ರಮೇಣ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ಒಟ್ಟಿಗೆ ಓಡಾಡಿಕೊಂಡಿದ್ದ ಜೋಡಿ ಮಧ್ಯೆ ಇತ್ತೀಚೆಗೆ ವಿರಸ ಮೂಡಿತ್ತು. ಈ ವೇಳೆ ಕಿರಣ್, ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದ. ಇದರಿಂದ ಯುವತಿ ಮನನೊಂದಿದ್ದಳು. ಪ್ರಿಯಕರನಿಗೆ ಒಂದು ಗತಿ ಕಾಣಿಸಲು ಒಳಸಂಚು ರೂಪಿಸಿ, ತನ್ನ ತಾಯಿ ಹಾಗೂ ಸಹೋದರ ಇಂದು ಬೆಳಗ್ಗೆ ಕೆಲಸಕ್ಕೆ ಹೋದ ಬಳಿಕ ಪ್ರಿಯಕರಿಗೆ ಕರೆ ಮಾಡಿ ಮನೆಗೆ ಬರುವಂತೆ ಕೋರಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನೆಲಮಂಗಲಕ್ಕೆ ಹೋಗಬೇಕಿದ್ದ ಕಿರಣ್, ಅಂಜನಾನಗರದ ಯುವತಿಯ ಮನೆಗೆ ಬಂದಿದ್ದ. ಮನೆಗೆ ಬಂದ ಪ್ರಿಯಕರನನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಳು. ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಳು. ಈಕೆಯ ಮಾತನ್ನು ಕಿರಣ್ ನಂಬಿದ್ದ. ಪೂರ್ವಸಂಚಿನಂತೆ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲುಗಳಿಗೆ ಹಗ್ಗ ಕಟ್ಟಿದ್ದಳು. ಯಾಕೆ ಬಿಗಿಯಾಗಿ ಕಟ್ಟುತ್ತೀಯಾ ಎಂದು ಕೇಳಿದಾಗ, ಇದು ವಿದೇಶ ಶೈಲಿಯ ಪ್ರೇಮ ನಿವೇದನೆ ಎಂದು ಹೇಳಿದ್ದಳು. ಬಳಿಕ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು. ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ವಿಫಲನಾದ ಕಿರಣ್, ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡು ನೋಡ-ನೋಡುತ್ತಿದ್ದಂತೆ ಸುಟ್ಟು ಸಜೀವ ದಹನವಾಗಿದ್ದಾನೆ. ಈತನ ಕೂಗಾಟ ಚೀರಾಟ ಕೇಳಿ ಮತ್ತು ಬೆಂಕಿ ಹೊಗೆ ಹೆಚ್ಚಾದಂತೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದರು. ಆರಂಭದಲ್ಲಿ ಕಿರಣ್, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದರು. ತನಿಖೆ ಮುಂದುವರಿಸಿದಾಗ ಯುವತಿ ಕೃತ್ಯ ಬಯಲಾಯಿತು ಎಂದು ಮೂಲಗಳು ತಿಳಿಸಿವೆ.
ಗೊಂದಲದ ಹೇಳಿಕೆ ನೀಡಿದ್ದ ಯುವತಿ: ನಾನು ಶೌಚಾಲಯಕ್ಕೆ ತೆರಳಿದ್ದೆ. ಆಗ ಜೋರು ಶಬ್ದ ಕೇಳಿಸಿತು. ಹೊರಗೆ ಬಂದೆ. ಅಷ್ಟರಲ್ಲಿ ಕಿರಣ್ ಬೆಂಕಿ ಹಚ್ಚಿಕೊಂಡಿದ್ದರು ಎಂಬುದಾಗಿ ಯುವತಿ ಹೇಳಿಕೆ ನೀಡಿದ್ದರು. ಯುವತಿಯ ಹೇಳಿಕೆಯಲ್ಲಿ ಗೊಂದಲವಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದಾಗ ಕಿರಣ್ ಬೈಕ್‌ನಲ್ಲಿ ಬಂದಾಗ ಅವರ ಕೈಯಲ್ಲಿ ಯಾವುದೇ ಕ್ಯಾನ್ ಇರಲಿಲ್ಲ ಎಂಬುದು ಗೊತ್ತಾಯಿತು. ತಕ್ಷಣವೇ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಬಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.






