ಇತರೆ

ವೈದ್ಯನ ಹತ್ಯೆ ಪ್ರಕರಣ:ಆರೋಪಿಯಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ, 50,000 ರೂ. ನಗದು ವಶಕ್ಕೆ 

Views: 101

ಕನ್ನಡ ಕರಾವಳಿ ಸುದ್ದಿ: ಶಿರಸಿಯ ಆಯುರ್ವೇದಿಕ್ ವೈದ್ಯನ ಕೊಲೆ ಆರೋಪಿಯನ್ನು ಪ್ರಕರಣ ನಡೆದ 24 ಗಂಟೆಯಲ್ಲೇ ಭೇದಿಸುವಲ್ಲಿ ಶಿರಸಿಯ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಕೊಲೆ ಆರೋಪಿ ಮಂಜುನಾಥ ಪಾಂಡುರಂಗ ನಾಯ್ಕ (70) ಎಂಬಾತ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ, 50,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಎಚ್.ಬಿ ಕಾಲೋನಿಯಲ್ಲಿ ಡಾ. ರಮೇಶ್ ಎಫ್. ಕಲ್ಗುಟ್ಕರ್ (51) ಎಂಬ ಆಯುರ್ವೇದ ವೈದ್ಯನ ಕೊಲೆಯಾಗಿತ್ತು. ಭಾನುವಾರ ಸಂಜೆ ಘಟನೆ ಬೆಳಕಿಗೆ ಬಂದಿತ್ತು‌. ಬಳಿಕ ಪ್ರಕರಣ ದಾಖಲಿಸಿಕೊಂಡ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಶಂಕಿತ ಆರೋಪಿಯನ್ನು ಸೆರೆಹಿಡಿದಿದ್ದಾರೆ.

ವೈದ್ಯ ಡಾ. ರಮೇಶ್ ಅವರು ಶಿರಸಿ ನಗರದ ಡಿಪೋ ಎದುರು ಆಯುರ್ವೇದದ ಆಸ್ಪತ್ರೆಯನ್ನು ಹೊಂದಿದ್ದರು. ಅವರ ಪತ್ನಿ ಕಳೆದ ಐದು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದು, ಪತ್ನಿಯ ತಂಗಿಯ ಜತೆಗೆ ಸೋಮವಾರ ಮರು ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಬಂಗಾರದ ಆಭರಣ ಹಾಗೂ ಹಣ ತಂದಿಟ್ಟಿದ್ದರು‌. ಇದೇ ಅವರ ಜೀವಕ್ಕೆ ಮುಳುವಾಗಿದ್ದು, ವೈದ್ಯನ ಕೊಲೆ ಮಾಡಿ ಶಂಕಿತ ಆರೋಪಿ ಆಭರಣ ಹಾಗೂ ಹಣ ದೋಚಿಕೊಂಡು ಪರಾರಿಯಾಗಿದ್ದನು.

ಘಟನೆಯ ಬಳಿಕ ಆರೋಪಿಯ ಪತ್ತೆಗಾಗಿ ಡಿಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣ ನಡೆದ ಕೆಲವೇ ಗಂಟೆಯೊಳಗಾಗಿ ಕೊಲೆ ಮಾಡಿದ ಆರೋಪಿತ ಮಂಜುನಾಥ ಪಿ.ಎಲ್ ಎಂಬುವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಕೊಲೆ ಆರೋಪಿ ಮೂಲತಃ ಶಿವಮೊಗ್ಗ ಜಿಲ್ಲೆಯವನಾಗಿದ್ದರೂ ಆಧಾರ್ ಕಾರ್ಡ್ನಲ್ಲಿ ಯಲ್ಲಾಪುರದ ವಿಳಾಸವಿದೆ ಎಂಬ ಮಾಹಿತಿ ದೊರಕಿದೆ. ಜತೆಗೆ ಕಳೆದ ಎರಡು ದಿನಗಳಿಂದ ಶಿರಸಿಯ ಶಾಂತಿ ನಗರದಲ್ಲಿ ಬಾಡಿಗೆ ರೂಮ್ನಲ್ಲಿ ವಾಸವಿದ್ದು, ಈ ಮೊದಲೇ ಪರಿಚಯವಿದ್ದ ವೈದ್ಯ ಡಾ. ರಮೇಶ್ ಅವರನ್ನು ಭೇಟಿಯಾಗಿದ್ದ. ಬಳಿಕ ಶನಿವಾರ ವೈದ್ಯನ ಮನೆಯಲ್ಲೇ ಆರೋಪಿ ಮತ್ತು ಕೊಲೆಯಾದವ ಇಬ್ಬರೂ ಮಲಗಿದ್ದು, ಭಾನುವಾರ ಬೆಳಗಿನಜಾವ ನಗ – ನಾಣ್ಯ ದೋಚಿ ವೈದ್ಯನ ಕೊಲೆ ಮಾಡಿ ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

 

Related Articles

Back to top button
error: Content is protected !!