ತೃತಿಯ ಭಾಷೆಗೆ ಗ್ರೇಡ್ ಬದಲು ಅಂಕ; ಮತ್ತೆ ಗೊಂದಲದಲ್ಲಿ ವಿದ್ಯಾರ್ಥಿಗಳು!
Views: 7
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ತೀವ್ರ ವಿವಾದ ಹಾಗೂ ಗೊಂದಲಕ್ಕೆ ಕಾರಣವಾಗಿದ್ದ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡಿಂಗ್ ಕೊಡಬೇಕು ಎನ್ನುವ ಸರಕಾರದ ನಿಲುವಿಗೆ ಹೈಕೋರ್ಟ್‌ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಅಂಕವನ್ನು ನೀಡಿ, ಅದನ್ನು ಅಂಕಪಟ್ಟಿಗೆ ಸೇರಿಸಬೇಕು ಎಂದು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ತೃತೀಯ ಭಾಷೆಯ ಮೌಲ್ಯಮಾಪನವನ್ನು ಅಂಕದ ಬದಲಿಗೆ ಗ್ರೇಡಿಂಗ್ ವ್ಯವಸ್ಥೆಯಲ್ಲಿ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಘೋಷಿಸಿ, ಅಧಿಸೂಚನೆಯನ್ನು ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಂಕ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ತನ್ನ ಹಿಂದಿನ ಆದೇಶದಲ್ಲಿ ಸಣ್ಣಪುಟ್ಟ ಮಾರ್ಪಾಡು ಮಾಡಿ ಅರ್ಜಿಯನ್ನು ವಿಲೇವಾರಿ ಮಾಡಿದೆ.
2025ರ ಅಕ್ಟೋಬರ್ 28ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರವೇ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ವಿಷಯದಲ್ಲಿ ಅಂಕಗಳನ್ನು ನೀಡಬೇಕು ಎಂದು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆಯ ವಿಷಯಗಳಿಗೆ ಅಂಕಗಳ ಬದಲಿಗೆ ಕೇವಲ ಗ್ರೇಡ್ ನೀಡುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿರ್ಧಾರಕ್ಕೆ ಈ ಮೊದಲು ಹೈಕೋರ್ಟ್ ತಡೆ ನೀಡಿತ್ತು. ಇದೀಗ ಅಂಕಗಳನ್ನೇ ನೀಡುವಂತೆ ಸ್ಪಷ್ಟ ಸೂಚನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗಿ ಏಪ್ರಿಲ್ 2ರವರೆಗೆ ನಡೆದು ಮುಕ್ತಾಯಗೊಂಡಿವೆ. ಆದರೆ, ಸರಕಾರವು ತೃತೀಯ ಭಾಷೆಯ ಗ್ರೇಡಿಂಗ್‌ಗೆ ಸಂಬಂಧಿಸಿದ ಕರಡು ನಿಯಮಗಳನ್ನು ಏಪ್ರಿಲ್ 10ರಂದು ಹೊರಡಿಸಿತ್ತು. ಪರೀಕ್ಷೆಗಳು ಪೂರ್ಣಗೊಂಡ ನಂತರ ನಿಯಮಗಳನ್ನು ಬದಲಾಯಿಸುವುದು ಅಥವಾ ಹೊಸ ಕರಡು ನಿಯಮಗಳನ್ನು ಅನ್ವಯಿಸುವುದು ಕಾನೂನುಬದ್ಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದ್ದರಿಂದ ತನ್ನ ಆದೇಶವನ್ನು ಮರುಪರಿಶೀಲಿಸಲು ನಿರಾಕರಿಸಿದ ಕೋರ್ಟ್, ಪರೀಕ್ಷೆಗೂ ಮುನ್ನ ಹೊರಡಿಸಲಾಗಿದ್ದ ಹಳೆಯ ಸುತ್ತೋಲೆಯಂತೆಯೇ (ಅ. 28, 2025) ಮೌಲ್ಯಮಾಪನ ನಡೆಸಿ ಅಂಕಗಳನ್ನು ನೀಡಲು ಸೂಚಿಸಿದೆ.
ಹಿಂದಿ ಬೋಧನೆಗೆ ಒಳ್ಳೆಯ ಶಿಕ್ಷಕರನ್ನು ನೇಮಿಸಿ ಎಂದ ಕೋರ್ಟ್
ಸರಕಾರದ ಪರವಾಗಿ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಳೆದ ವರ್ಷ 1.5 ಲಕ್ಷ-1.75 ಲಕ್ಷ ವಿದ್ಯಾರ್ಥಿಗಳು 3ನೇ ವಿಷಯದಲ್ಲಿ ನಪಾಸಾಗಿದ್ದಾರೆ. ಬೇರೆ ರಾಜ್ಯಗಳಂತೆ ಕರ್ನಾಟದಲ್ಲಿ ದ್ವಿಭಾಷಾ ನೀತಿಯಿಲ್ಲ. ಇಲ್ಲಿ ತ್ರಿಭಾಷಾ ನೀತಿಯಿದೆ
ಸರಕಾರಕ್ಕೆ ಹಿನ್ನಡೆ
ಗ್ರೇಡ್ ನೀಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. 15-16ನೇ ವಯಸ್ಸಿನಲ್ಲಿ ನಪಾಸಾದರೆ ಮಕ್ಕಳಿಗೆ ಸಾಕಷ್ಟು ಒತ್ತಡವಾಗುತ್ತದೆ. ಗ್ರಾಮೀಣ ಪ್ರದೇಶದ ಶೇ.80ರಷ್ಟು ವಿದ್ಯಾರ್ಥಿಗಳು ಹಿಂದಿಯಲ್ಲಿ ನಪಾಸಾಗುತ್ತಿದ್ದಾರೆ ಎಂದರು. ಈ ಹಂತದಲ್ಲಿ ಪೀಠವು ನಿಮ್ಮ ಉದ್ದೇಶ ಎಲ್ಲರನ್ನೂ ಪಾಸು ಮಾಡುವುದಾಗಿದೆಯೇ? ನಾವು ಓದುವಾಗಲು ಅದೇ ಒತ್ತಡವಿತ್ತು. ತಮಿಳು, ಉರ್ದು, ತೆಲುಗು ಮೊದಲ ಭಾಷೆಯಾಗಿರುವ ಕಡೆ ಕನ್ನಡ ಮೂರನೇ ಭಾಷೆಯಾಗಿದೆ. ಹಿಂದಿ ಬೋಧಿಸಲು ಒಳ್ಳೆಯ ಶಿಕ್ಷಕರನ್ನು ನೇಮಿಸಿ ಎಂದಿತು. ಇದಕ್ಕೆ ಅಡ್ವಕೇಟ್ ಜನರಲ್ ಒಳ್ಳೆಯ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು. ಪ್ರತಿವಾದಿಗಳ ಪರ ವಕೀಲರು ಮೂರನೇ ವಿಷಯದಲ್ಲಿ ವಿದ್ಯಾರ್ಥಿಯು ಅತಿ ಹೆಚ್ಚು ಅಂಕಗಳಿಸಿದರೆ ಅಂಥವರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ವಾದಿಸಿದರು.
ಮತ್ತೆ ಗೊಂದಲದಲ್ಲಿ ವಿದ್ಯಾರ್ಥಿಗಳು
ಪರೀಕ್ಷೆಯ ಮಧ್ಯದಲ್ಲಿಯೇ ಸರಕಾರದ ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಅನೇಕ ವಿದ್ಯಾರ್ಥಿಗಳು ತೃತೀಯ ಭಾಷಾ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೀಗ ಅಂಕ ವ್ಯವಸ್ಥೆ ಮುಂದುವರಿಸುವಂತೆ ಹೈಕೋರ್ಟ್ ಹೇಳಿರುವುದರಿಂದ ಕೆಲ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ತೃತೀಯ ಭಾಷೆಯಲ್ಲಿ ಅಂಕ ಕಡಿಮೆ ಪಡೆದರೆ, ಒಟ್ಟಾರೆ ಪರ್ಸೆಂಟೇಜ್ ಕಡಿಮೆಯಾಗಲಿದೆ ಎನ್ನುವುದು ಅನೇಕರ ಆತಂಕವಾಗಿದೆ. ಈ ನಡುವೆ ಗ್ರೇಡಿಂಗ್ ವ್ಯವಸ್ಥೆಯಲ್ಲಿ ಫಲಿತಾಂಶ ನೀಡಲು ಇಲಾಖೆ ಸಜ್ಜಾಗಿದ್ದರಿಂದ, ಇದೀಗ ಅಂಕವನ್ನು ನೀಡಬೇಕು ಎನ್ನುವ ಹೈಕೋರ್ಟ್ ಆದೇಶದಿಂದ ಇಡೀ ಅಂಕಪಟ್ಟಿಯನ್ನೇ ಬದಲಾಯಿಸಬೇಕಿದೆ. ಆದ್ದರಿಂದ ಫಲಿತಾಂಶ ಪ್ರಕಟವೂ ತಡವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.






