ಭದ್ರಾವತಿ :ಯುವಕನಿಗೆ ಚೂರಿ ಇರಿತ ಬಿಗಿ ಬಂದೋಬಸ್ತ್

Views: 0
ಶಿವಮೊಗ್ಗ:ಮೊಬೈಲ್ ವಿಚಾರಕ್ಕೆ ಜಗಳ ತೆಗೆದು ದುಷ್ಕರ್ಮಿಗಳು ಯುವಕನೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆಯ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.
ರಾಗಿಗುಡ್ಡದಲ್ಲಿ ನಡೆದ ಹಿಂಸಾಚಾರ ಮಾಡುವ ಮುನ್ನವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.ಭದ್ರಾವತಿ ಹೊಸಮನೆ ಬಡಾವಣೆಯ ಹನುಮಂತನಗರದ ನಂದಕುಮಾರ್ ಚಾಕು ಇರಿತಕ್ಕೊಳಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ.
ಮೊಬೈಲ್ ವಿಚಾರವಾಗಿ ನಂದಕುಮಾರ್ ಮತ್ತು ಏರಿಯಾದ ಯುವಕರ ಗುಂಪಿನ ನಡುವೆ ಜಗಳ ನಡೆದಿದೆ. ಈ ವೇಳೆ, ಈ ಗುಂಪು ನಂದಕುಮಾರ್ ಬೆನ್ನಿಗೆ ಚಾಕುವಿನಿಂದ ಇರಿದಿದೆ. ಗಂಭೀರ ಗಾಯಗೊಂಡ ನಂದಕುಮಾರ್ ಅವರನ್ನು ಕೂಡಲೇ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ನಂದಕುಮಾರ್ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ನಂದಕುಮಾರ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈಯಕ್ತಿಕ ಕಾರಣಕ್ಕೆ ನಡೆದ ಗಲಾಟೆ ಸಂಬಂಧ ಸದ್ಯ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಹನುಮಂತನಗರ ನಿವಾಸಿಯಾಗಿರುವ ನಂದಕುಮಾರ್, ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ನಂದಕುಮಾರ್ ತಮ್ಮ ಮೊಬಲ್ ಅನ್ನು ಅದೇ ಏರಿಯಾದ ಕೆಲ ಯುವಕರ ಬಳಿ ಹಣಕ್ಕೆ ಅಡ ಇಟ್ಟಿದ್ದರು. ನಿನ್ನೆ ಸಂಜೆ ಮೊಬೈಲ್ ಅಡ ಇಟ್ಟವರ ಬಳಿ ತೆರಳಿ ಹಣ ನೀಡಿ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ಆರೋಪಿಗಳು ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಈ ಸಂಬಂಧ ನಂದ ಕುಮಾರ್ ಪೊಲೀಸರಿಗೆ ದೂರು ನೀಡಿ ವಾಪಸ್ ಆಗುವಾಗ ನಮ್ಮ ವಿರುದ್ದ ದೂರು ನೀಡುತ್ತೀಯಾ ಎಂದು ಯುವಕರ ಗುಂಪು ಗಲಾಟೆ ಮಾಡಿದೆ. ಜೊತೆಗೆ ನಂದಕುಮಾರ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೆಲ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆ ಬಳಿ ಬಂದು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ರಾತ್ರಿ ಆಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಳಿಕ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಜನರನ್ನು ಆಸ್ಪತ್ರೆಯಿಂದ ಕಳುಹಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಸ್ಥಳದಿಂದ ತೆರಳಿದ್ದಾರೆ.