ಬ್ರಹ್ಮಾವರ: ಆರೆಸ್ಸೆಸ್‌ನ ಗುರು ಪೂಜೆಯಲ್ಲಿ ಪಾಲ್ಗೊಂಡು,ಗುರುದಕ್ಷಿಣೆ ಸಮರ್ಪಿಸಿದ ವ್ಯಕ್ತಿ ಸಾವು

Views: 238
ಕನ್ನಡ ಕರಾವಳಿ ಸುದ್ದಿ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರೆಸ್ಸೆಸ್‌ನ ಗುರು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು. ಗುರುದಕ್ಷಿಣೆ ಸಮರ್ಪಿಸಿ ಮನೆಗೆ ತೆರಳಿದ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ.
ಬಾಬು ದೇವಾಡಿಗ (76) ಅವರು ಜು. 13ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಆರೆಸ್ಸೆಸ್ ಹಿರಿಯ ಕಾರ್ಯಕರ್ತ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಬಾಬು ದೇವಾಡಿಗ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಹಠ ಹಿಡಿದು ರವಿವಾರ ಸಂಜೆ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಆರೆಸ್ಸೆಸ್‌ನ ಗುರು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗುರುದಕ್ಷಿಣೆ ಸಮರ್ಪಿಸಿ ಮನೆಗೆ ಮರಳಿದವರೇ ಇಹಲೋಕ ತ್ಯಜಿಸಿದ್ದಾರೆ.
ಎಸ್‌ಎಂಎಸ್ ಪ.ಪೂ. ಕಾಲೇಜಿನಲ್ಲಿ ಸಿಬಂದಿಯಾಗಿ ನಿವೃತ್ತರಾಗಿದ್ದರು.ಸುಮಾರು 50 ವರ್ಷ ತಾಲೂಕಿನಾದ್ಯಂತ ಸೈಕಲ್‌ನಲ್ಲೇ ಸುತ್ತಿ ಹಿಂದುತ್ವ, ರಾಷ್ಟ್ರೀಯತೆ ವಿಚಾರಗಳನ್ನು ಹಳ್ಳಿ ಹಳ್ಳಿಗೆ ಪ್ರಚಾರ ಮಾಡಿದ್ದರು.
ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಆರೆಸ್ಸೆಸ್‌ನ ಹಿರಿಯ ಪ್ರಚಾರಕ ರವೀಂದ್ರ, ವಿಭಾಗ ಸಂಘ ಚಾಲಕ ಡಾ| ನಾರಾಯಣ ಶೆಣೈ, ಪ್ರಮುಖರು ಸಂತಾಪ ಸೂಚಿಸಿದ್ದಾರೆ.






