ಬ್ರಹ್ಮಕಲಶೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಕಾಲು ಮುರಿಯಿರಿ ಎಂದ ಆರೋಪ; ಬಿಜೆಪಿ ಶಾಸಕ ಕಾಮತ್ ವಿರುದ್ದ ಎಫ್ಐಆರ್

Views: 100
ಕನ್ನಡ ಕರಾವಳಿ ಸುದ್ದಿ: ಮಂಗಳೂರು ನಗರದ ಶಕ್ತಿನಗರದಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವಕ್ಕೆ ಬಂದಿದ್ದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಬ್ರಹ್ಮಕಲಶೋತ್ಸವ ಸ್ವಯಂ ಸೇವಕನಾಗಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಕಾಲು ಮುರಿಯಿರಿ ಎಂದು ಬೆಂಬಲಿಗರಿಗೆ ಹೇಳಿದ ಆರೋಪದ ಮೇರೆಗೆ ಅವರ ವಿರುದ್ದ ಕಂಕನಾಡಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಗಳೂರಿನ ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿದ್ದರು. ಭಾನುವಾರ ರಾತ್ರಿ ನಡೆದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಯಶವಂತ ಪ್ರಭು, ಆಶಾಲತಾ, ದಯಾನಂದ ನಾಯ್ಕ್ ಅವರನ್ನು ಉದ್ದೇಶಿಸಿ ದೇವಸ್ಥಾನಕ್ಕೆ ಕಲ್ಲು ಹೊಡೆಯುವ ನಿಮಗೆ ಇಲ್ಲೇನು ಕೆಲಸ? ಎಂದು ಕೇಳಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಅವರು ಸಭೆ ಮುಗಿಸಿ ತೆರಳುವ ವೇಳೆ ಈ ರೀತಿ ಯಾಕೆ ಹೇಳಿದ್ದು? ಎಂದು ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಆರೋಪಿಗಳಿಗೆ ಆತನ ಕೈಕಾಲು ಮುರಿಯಿರಿ ಎಂದು ದುಷ್ಪ್ರೇರಣೆ ನೀಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಮಾತನಾಡಿ,ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರಿಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಅಶ್ವಿತ್ ಕೊಟ್ಟಾರಿ, ಮಣಿ, ಜಯಪ್ರಕಾಶ್, ಶಾಸಕ ವೇದವ್ಯಾಸ ಕಾಮತ್ ಮತ್ತು ಇತರ ಏಳೆಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿದೂರು ದಾಖಲು : ಘಟನೆಯ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಣಿ ಎಂಬ ವ್ಯಕ್ತಿ ದೂರು ನೀಡಿದ್ದು, ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು, ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರು ಶಾಸಕರು ಬಂದ ವೇಳೆ ಸ್ವಾಗತಿಸಿದಾಗ, ದೇವಸ್ಥಾನಕ್ಕೆ ಕಲ್ಲು ಹೊಡೆಯುವವರಿಗೆ ಇಲ್ಲೇನು ಕೆಲಸ? ಎಂದು ಕೇಳಿದ್ದಾರೆ. ಭಾಷಣದಲ್ಲಿ ಕೂಡ ಶಾಸಕ ವೇದವ್ಯಾಸ ಕಾಮತ್ ಇಲ್ಲಿ ಮಂದಿರಕ್ಕೆ ಕಲ್ಲು ಹೊಡೆಯುವವರು ಇದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಅವರು ವಾಪಾಸ್ ಹೋಗುವಾಗ ನಾವು ಈ ಮಂದಿರ ಕಟ್ಟಿದವರು, ಪದಾಧಿಕಾರಿಗಳು. ನಾವು ಎಲ್ಲಿ ಕಲ್ಲು ಹೊಡೆದಿದ್ದೆವು? ಎಂದು ಪ್ರಶ್ನಿಸಿದ್ದಾರೆ.
ನಾವು ಮಂದಿರ ಕಟ್ಟಿದ್ದು, ಕಲ್ಲು ಹೊಡೆದಿಲ್ಲ. ನೀವು ಕ್ಷಮೆಯಾಚಿಸಬೇಕು ಎನ್ನುತ್ತಾರೆ. ಈ ವೇಳೆ, ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡುತ್ತಾರೆ. ಇವರು ಆಸ್ಪತ್ರೆಯಲ್ಲಿ ದಾಖಲಾದಾಗ ಅಲ್ಲಿಯೂ ಬಂದು ದಾಂಧಲೆ ಮಾಡುತ್ತಾರೆ. ಎಫ್ಐಆರ್ ದಾಖಲಾದಾಗ ಮಣಿ ಎಂಬುವನ ಮೂಲಕ ದಲಿತ ದೌರ್ಜನ್ಯ ಪ್ರಕರಣ ಎಂದು ನಮ್ಮ ಕಾರ್ಯಕರ್ತನ ಮೇಲೆ ಪ್ರತಿದೂರು ದಾಖಲಿಸುತ್ತಾರೆ. ಆ ಮೂಲಕ ಸುಳ್ಳು ಕೇಸ್ ನೀಡಿದ್ದಾರೆ. ಇದು ಪೊಲೀಸರಿಗೂ ಗೊತ್ತಿದೆ. ಶಾಸಕ ವೇದ ವ್ಯಾಸ ಕಾಮತ್ ಮಾತಾಡಿದ್ದಕ್ಕೆ ದಾಖಲೆ ಇದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಸಕರಾಗಿ ಇಂತಹ ಕೀಳುಮಟ್ಟದ ಪ್ರವೃತ್ತಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.