ಬಾರಕೂರು ಪದ್ಮಶಾಲಿ ಮೂಲ ಕ್ಷೇತ್ರದ ದೇವಳದಲ್ಲಿ “ಶೋಭಾ ರಾಮಾಯಣ” ಲೋಕಾರ್ಪಣೆ
"ನಿರಂತರ ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಅನೇಕ ಗ್ರಂಥಗಳನ್ನು ಓದಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಕೃತಿ ರಚಿಸಿದ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ ಅವರ "ಶೋಭಾ ರಾಮಾಯಣ"ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಪ್ರೇರಣೆಯಾಗಿದೆ ಮತ್ತು ಈ ಗ್ರಂಥ ಭಾಮಿನಿ ಷಟ್ಪದಿ ಪರಂಪರೆಗೆ ಸೇರಿಕೊಂಡು ಶೋಭೆ ತಂದಿದೆ."----ಡಾ.ಪಾದೆಕಲ್ಲು ವಿಷ್ಣು ಭಟ್

Views: 291
ಬ್ರಹ್ಮಾವರ :ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಸಾಹಿತಿ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ ರಚಿಸಿರುವ ಗ್ರಂಥ ‘ಶೋಭಾ ರಾಮಾಯಣ’ ಜ. 22ರಂದು ಲೋಕಾರ್ಪಣೆಗೊಂಡಿದೆ.
ದೇವಳದ ಆಡಳಿತ ಮೊಕ್ತೇಸರರಾದ ಡಾ.ಸಿ. ಜಯರಾಮ ಶೆಟ್ಟಿಗಾರ ಅವರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ,ಗ್ರಂಥವನ್ನು ಶ್ರೀದೇವರಿಗೆ ಪೂಜಿಸಲಾಯಿತು.ನಂತರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮಾ.ಅನ್ವಿತ್ ಅವರು ‘ಶೋಭಾ ರಾಮಾಯಣ’ ಗ್ರಂಥವನ್ನು ಅನಾವರಣಗೊಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ.ಪಾದೆಕಲ್ಲು ವಿಷ್ಣು ಭಟ್ ಮಾತನಾಡಿ, 20ನೇ ಶತಮಾನದ ಹಳೆಯ ಪಾದ,ಪ್ರಾಸ,ಯತಿ,ಗಣ ಛಂದೋಬದ್ಧ ಪದ್ಯ ಕಾವ್ಯ ಆದಾಗ ನೋಡಲಿಕ್ಕೆ ಮತ್ತು ಅದರ ಉಪಯೋಗಕ್ಕೆ ಬರುತ್ತದೆ. ಅದನ್ನು ನವ್ಯವಾಗಿ ಬರೆಯಲು ಇದೊಂದು ನೇಕಾರಿಗೆ ಇದ್ದಂತೆ
ನಿರಂತರ ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಅನೇಕ ಗ್ರಂಥಗಳನ್ನು ಓದಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಕೃತಿ ರಚಿಸಿದ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ ಅವರ “ಶೋಭಾ ರಾಮಾಯಣ” ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಪ್ರೇರಣೆಯಾಗಿದೆ ಮತ್ತು ಈ ಗ್ರಂಥ ಭಾಮಿನಿ ಷಟ್ಪದಿ ಪರಂಪರೆಗೆ ಸೇರಿಕೊಂಡು ಶೋಭೆ ತಂದಿದೆ ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ದೇವಳದ ಆಡಳಿತ ಮೊಕ್ತೇಸರ ಡಾ.ಸಿ.ಜಯರಾಮ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿ ‘ಶ್ರೀರಾಮನ ಮೂಲ ಸ್ಥಾನ ಅಯೋಧ್ಯೆಯಲ್ಲಿ ಐತಿಹಾಸಿಕವಾದ ಬಾಲರಾಮನ ಪ್ರತಿಷ್ಠೆ, ಪದ್ಮಶಾಲಿಗರ ಮೂಲ ಕ್ಷೇತ್ರ ಐತಿಹಾಸಿಕ ಪುಣ್ಯಭೂಮಿ ಬಾರ್ಕೂರಿನಲ್ಲಿ ಶೋಭ ರಾಮಾಯಣ ಗ್ರಂಥ ಲೋಕಾರ್ಪಣೆ ಇವು ಏಕಕಾಲದಲ್ಲಿ ಘಟಿಸಿರುವುದು ಐತಿಹಾಸಿಕ ಮಾತ್ರವಲ್ಲ ಯೋಗಾನು ಯೋಗ’ ಎಂದರು.
ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾರ್ಕೂರು ರಂಗನಕೆರೆ ಶ್ರೀ ಬಿ.ಶ್ರೀನಿವಾಸ್ ಶೆಟ್ಟಿಗಾರ್, ಪದ್ಮಲೇಖ ಪತ್ರಿಕೆ ಸಂಪಾದಕ ಗಿರೀಶ್ ಶೆಟ್ಟಿಗಾರ್ ವಿಟ್ಲ, ನಿವೃತ್ತ ಬ್ಯಾಂಕ್ ಅಧಿಕಾರಿ ಭುವನ ಪ್ರಸಾದ್ ಹೆಗ್ಡೆ ಮಣಿಪಾಲ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಜಯಶ್ರೀ ಭಟ್ ಪುತ್ತೂರು ಗ್ರಂಥದ ಅವಲೋಕನ ಮಾಡಿದರು.
ಇದೇ ಸಂದರ್ಭದಲ್ಲಿ ಕೃತಿಕಾರರಾದ ಶ್ರೀಮತಿ ಶೋಭಾ ಹರಿಪ್ರಸಾದ್, ಸಲಹೆ ನೀಡಿದ ಪತಿ ಹರಿಪ್ರಸಾದ್ ಶೆಟ್ಟಿಗಾರ್, ಕೃತಿ ಅನಾವರಣಗೊಳಿಸಿದ ಮಾ. ಅನ್ವಿತ್ ಅವರಿಗೆ ದೇವಸ್ಥಾನದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕನ್ನಡ ತುಳು ಸಾಹಿತ್ಯ ವೇದಿಕೆ ಉಡುಪಿ ಹಾಗೂ ಹೊಂಗಿರಣ ಸಾಹಿತ್ಯ ಬಳಗದ ಸದಸ್ಯರಿಂದ ಕೃತಿಯ ವಾಚನ ಮತ್ತು ಗಾಯನ ನಡೆಯಿತು.
ವತ್ಸಲಾ ಶಾಸ್ತ್ರಿ ಪ್ರಾರ್ಥಿಸಿದರು. ಸಚ್ಚಿದಾನಂದ ಬಿಲ್ಪತ್ರೆ ಸ್ವಾಗತಿಸಿದರು. ಚೇಂಪಿ ದಿನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಪೂಜಾರಿ ನೇರಂಬೋಳು ವಂದಿಸಿದರು.