ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಡೆತ್ ಪ್ರೂಫ್ ಕೇಳಿದ ಬ್ಯಾಂಕ್: ಶವದ ಅಸ್ತಿ ಪಂಜರವನ್ನೇ ತಂದ ಅಣ್ಣ!
Views: 144
ಕನ್ನಡ ಕರಾವಳಿ ಸುದ್ದಿ: ತನ್ನ ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಸಾಧ್ಯವಾಗದಿದ್ದಾಗ, ಹತಾಶನಾದ ವ್ಯಕ್ತಿಯೊಬ್ಬ ಹೂತಿದ್ದ ಶವದ ಅವಶೇಷಗಳನ್ನು ಹೊರತೆಗೆದು ಬ್ಯಾಂಕ್ ಎದುರು ತಂದಿಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ದಿಯಾನಾಲಿ ಗ್ರಾಮದ ಅವಿದ್ಯಾವಂತ ಬುಡಕಟ್ಟು ಸಮುದಾಯದ ವ್ಯಕ್ತಿ ಜಿತು ಮುಂಡಾ ಎಂಬವರು, 2 ತಿಂಗಳ ಹಿಂದೆ ನಿಧನರಾಗಿದ್ದ ತನ್ನ ತಂಗಿ ಕಲಾ ಮುಂಡಾ ಅವರ ಖಾತೆಯಲ್ಲಿದ್ದ 19,300 ರೂಪಾಯಿಗಳನ್ನು ಹಿಂಪಡೆಯಲು ಬ್ಯಾಂಕ್ಗೆ ಹಲವು ಬಾರಿ ಅಲೆದಿದ್ದಾರೆ. ಬ್ಯಾಂಕ್ ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಹಣವನ್ನು ಪಡೆಯಲು ವಾರಸುದಾರರ ಮರಣ ಪ್ರಮಾಣಪತ್ರ ಅಥವಾ ನಾಮಿನಿ ವಿವರ ಬೇಕಾಗುತ್ತದೆ. ಆದರೆ, ಇವುಗಳ ಅರಿವಿಲ್ಲದ ಜಿತು ಮುಂಡಾ ಅವರು, ಬ್ಯಾಂಕ್ ಅಧಿಕಾರಿಗಳು ಪದೇ ಪದೆ ದಾಖಲೆ ಕೇಳುತ್ತಿರುವುದಕ್ಕೆ ಬೇಸರಗೊಂಡಿದ್ದರು.
ತನ್ನ ತಂಗಿ ಎರಡು ತಿಂಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎಂದು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದರೂ, ನಿಯಮಗಳ ಪ್ರಕಾರ ಹಣ ನೀಡಲು ದಾಖಲೆ ಸಲ್ಲಿಸಲು ಅವರು ಸೂಚಿಸಿದ್ದರು. ತಂಗಿ ಮೃತಪಟ್ಟಿದ್ದಾಳೆ ಎಂದು ಸಾಬೀತುಪಡಿಸಲು ಬೇರೆ ದಾರಿಯಿಲ್ಲದೆ, ಆತ ಸ್ಮಶಾನಕ್ಕೆ ತೆರಳಿ ಹೂತಿಟ್ಟ ಶವದ ಅವಶೇಷಗಳನ್ನು ಅಗೆದು ತೆಗೆದಿದ್ದಾನೆ. ಬಳಿಕ, ಅದನ್ನು ಪಟಾಣಾ ಬ್ಲಾಕ್‌ನಲ್ಲಿರುವ ಒಡಿಶಾ ಗ್ರಾಮೀಣ ಬ್ಯಾಂಕ್ ಎದುರು ತಂದು ಇಟ್ಟಿದ್ದಾನೆ.
ಮೃತದೇಹ ಅವಶೇಷಗಳನ್ನೇ ಬ್ಯಾಂಕ್ ಮುಂದೆ ತಂದಿಟ್ಟ ಘಟನೆಯ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, “ನಾವು ಮೃತ ಗ್ರಾಹಕರನ್ನು ಖುದ್ದಾಗಿ ಹಾಜರುಪಡಿಸುವಂತೆ ಕೇಳಿಲ್ಲ. ಮರಣ ಪ್ರಮಾಣಪತ್ರ ಸಲ್ಲಿಸಿದ ಕೂಡಲೇ ಹಣವನ್ನು ನೀಡುವುದಾಗಿ ತಿಳಿಸಿದ್ದೇವೆ. ಜಿತು ಮುಂಡಾ ಅವರು ಕುಡಿದ ಅಮಲಿನಲ್ಲಿ ಬಂದು ಗಲಾಟೆ ಮಾಡಿದ್ದಲ್ಲದೆ, ಶವದ ಅವಶೇಷಗಳನ್ನು ತಂದಿಟ್ಟಿದ್ದಾರೆ. ಇದು ಅತ್ಯಂತ ಆಘಾತಕಾರಿ” ಎಂದಿದ್ದಾರೆ.
ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಜಿತು ಅವರಿಗೆ ಹಣ ಕೊಡಿಸುವ ಭರವಸೆ ನೀಡಿ ಶವದ ಅವಶೇಷಗಳನ್ನು ಮರುಸಂಸ್ಕಾರ ಮಾಡಲು ವ್ಯವಸ್ಥೆ ಮಾಡಿದರು. ಪಟಾಣಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಮಾತನಾಡಿ, “ಜಿತು ಅವರು ಅವಿದ್ಯಾವಂತನಾಗಿದ್ದು, ಅವರಿಗೆ ಬ್ಯಾಂಕ್ ನಿಯಮಗಳು ಅರ್ಥವಾಗಿಲ್ಲ. ಅಧಿಕಾರಿಗಳು ಕೂಡ ಅವರಿಗೆ ಪ್ರಕ್ರಿಯೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ, ಅವರು ಕೋಪದಲ್ಲಿ ಶವದ ಅವಶೇಷಗಳನ್ನು ಬ್ಯಾಂಕ್ ಮುಂದೆ ತಂದಿಟ್ಟಿದ್ದಾರೆ ಎಂದು ತಿಳಿಸಿದರು.






