ಸಿದ್ದರಾಮಯ್ಯ ಅಧಿಕಾರ ಮುಂದುವರಿಕೆಗೂ, ಪದತ್ಯಾಗಕ್ಕೂ ಸಿದ್ದ:ಮಾಜಿ ಸಚಿವ ಕೆ.ಎನ್.ರಾಜಣ್ಣ
Views: 2
ಕನ್ನಡ ಕರಾವಳಿ ಸುದ್ದಿ: ಸಿಎಂ ಸಿದ್ದರಾಮಯ್ಯ ಅಧಿಕಾರ ಮುಂದುವರಿಸಲು ಮತ್ತು ಪದತ್ಯಾಗ ಎರಡಕ್ಕೂ ಸಿದ್ಧರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಗೊಂದಲ ಬಗೆಹರಿಸಿದಷ್ಟು ರಾಜ್ಯಕ್ಕೆ ಒಳ್ಳೆಯದು. ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಸಿದ್ದರಾಮಯ್ಯ ಅವರು ಅಧಿಕಾರ ಮುಂದುವರಿಕೆಗೂ ಸಿದ್ದರಾಗಿದ್ದಾರೆ, ಪದತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದರು.
ಇದರಲ್ಲಿ ಪಕ್ಷದ ಭವಿಷ್ಯ ಅಡಗಿರುತ್ತದೆ. ಹೀಗಾಗಿ ಹೈಕಮಾಂಡ್ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಸಿಎಂ ಜೊತೆಗೆ ಸಭೆ ಮಾಡಿದಾಗಲೂ ಅವರು ಓಪನ್ ಮೈಂಡ್ನಲ್ಲಿ ಇದ್ದಾರೆ. ರಾಹುಲ್ ಗಾಂಧಿ ಸೂಚನೆ ಪಾಲನೆ ಮಾಡುತ್ತೇನೆ. ಆಗ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಸಿಎಂ ಅಭಿಮತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ತೆಗೆದುಕೊಳ್ಳುವ ತೀರ್ಮಾನದಂತೆ ನಡೆಯೋಣ ಎಂದಿದ್ದಾರೆ ಎಂದು ತಿಳಿಸಿದರು.
ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ಧ. ಅಹಿಂದ ವರ್ಗ ನಿಜವಾಗಿ ಸಮಾಧಾನವಾಗಿಲ್ಲ. 2013-18 ರ ಸಿದ್ದರಾಮಯ್ಯಗೂ ಈಗಿನ 2023-28 ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸ ಇದೆ. ಮುಂದಿನ ಚುನಾವಣೆ ಎರಡು ವರ್ಷ ಇದೆ. ಮುಂದಿನ ರಾಜಕೀಯ ಹೀಗೇ ಆಗಬಹುದು ಎಂಬುದನ್ನು ಹೇಳಲು ಈಗಲೇ ಸಾಧ್ಯವಿಲ್ಲ. ರಾಜಕಾರಣದಲ್ಲಿ ಬಹಳಷ್ಟು ನೀರು ಹರಿಬೇಕಾದ ಸಮಯವೂ ಇದೆ ಎಂದರು.
ಹಾಲಿ ಸಚಿವರ ಸೋಲುವ ವರದಿ ವಿಚಾರವಾಗಿ ಪ್ರತಿಕ್ರಿಯಿಸಿ, ಸೋಲು – ಗೆಲವು ರಾಜಕೀಯದಲ್ಲಿ ಇದ್ದಿದ್ದೇ. ಈ ಹಿಂದೆ ಎಸ್.ಎಂ.ಕೃಷ್ಣ ಕಾಲದಲ್ಲಿ ಬಹುತೇಕ ಸಚಿವರು ಸೋತು ಹೋದ್ರು. ಸ್ವತಃ ಕೃಷ್ಣ ಅವರು ಮದ್ದೂರಿನಿಂದ ಚಾಮರಾಜಪೇಟೆ ಕ್ಷೇತ್ರಕ್ಕೆ ಹೋದ್ರು. ಹೀಗೆ ಆಗುತ್ತದೆ ಅಂತ ಈಗಲೇ ಏನು ಹೇಳಲು ಆಗಲ್ಲ. ರಾಜಕೀಯ ದಿಕ್ಸೂಚಿ ಹೇಳಲು ಕಾಲ ಪಕ್ವವಾಗಿಲ್ಲ ಎಂದು ರಾಜಣ್ಣ ಅಭಿಪ್ರಾಯಪಟ್ಟರು.
ಪಂಚ ರಾಜ್ಯಗಳ ಚುನಾವಣೆ, ರಾಜ್ಯದಲ್ಲಿ ಉಪಸಮರದ ಹಿನ್ನೆಲೆ ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ನಾಯಕತ್ವ ಬದಲಾವಣೆಯ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಅಂದರೆ ಮೇ ಮೊದಲ ವಾರದ ಬಳಿಕ ರಾಜ್ಯದ ಪವರ್ ಫೈಟ್ಗೆ ಹೊಸ ಸಂಚಲನೆ ಸಿಗಲಿದೆ ಎಂಬ ಮುನ್ಸೂಚನೆ ಸಿಗುತ್ತಿದೆ.






