ಇತರೆ

ಬಜಪೆ ಸರಣಿ ಕಳ್ಳತನ :ಮನೆಗೆ ನುಗ್ಗಿ 5.ಲಕ್ಷ ರೂ‌. ಮೌಲ್ಯದ ಚಿನ್ನಾಭರಣ ಕಳವು; ಇಬ್ಬರು  ಆರೋಪಿಗಳ  ಸೆರೆ

Views: 0

ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಮನೆ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಶನಿವಾರ ಬಂಧಿಸಿದ್ದು, ಸುಮಾರು 5.ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ತೌಸೀಫ್ ಅಹಮ್ಮದ್ (34) ಮತ್ತು ಕಸಬಾ ಬೇಂಗ್ರೆಯ ನಿವಾಸಿ ಮೊಹಮ್ಮದ್ ಫರಾಜ್ (27) ಬಂಧಿತರು.

ಸೆ.29 ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ ತೌಸೀಫ್ ಅಹಮ್ಮದ್ ಮತ್ತು ಮೊಹಮ್ಮದ್ ಫರಾಜ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಳಿಕ ಅವರಿಂದ ಸುಮಾರು 5 ಲಕ್ಷ ರೂ. ಮೌಲ್ಯದ 75 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಕಳವು ಮಾಡಲು ಬಳಸಿದ್ದ ವಾಹನ (ಬೈಕ್) ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಮಂಗಳೂರು ನಗರ, ಪಣಂಬೂರು, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ, ಬಕಟ್ವಾಳ ನಗರ ಮತ್ತು ಉಡುಪಿ ಜಿಲ್ಲೆಯ ಉದ್ಯಾವರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

2021ರ ಮಾ.26ರಂದು ಬಡಗುಳಿಪಾಡಿ ಗ್ರಾಮದ ಮಣೇಲಪದವು ನಿವಾಸಿ ಸದಾಶಿವ ಸಾವಂತ ಎಂಬವರ ಮನೆಯ ಬೀಗ ಮುರಿದು ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು, 2023ರ ಜ.13 ರಂದು ಅಡ್ಡೂರು ಗ್ರಾಮದ ಪುಣಿಕೋಡಿ ನಿವಾಸ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಮನೆಯ ಕಪಾಟಿನಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಮಂಗಳೂರು ನಗರ ಪೊಲೀಸ್ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Back to top button