ಕರಾವಳಿ

ಬಂಟ್ವಾಳ: ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Views: 107

ಬಂಟ್ವಾಳ,ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ 6:20ರ ಸುಮಾರಿಗೆ ಬಿ.ಸಿ.ರೋಡಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ನಿವಾಸಿ ನಯನಾ ಎಂ.ಜಿ.(27ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಬ್ಯಾಗ್ ನಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ಆಧಾರದಲ್ಲಿ ರೈಲ್ವೆ ಪೊಲೀಸರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಯನಾರ ಹೆಸರಿರುವ ಆ ಆಧಾರ್ ಕಾರ್ಡ್ ನಲ್ಲಿ ಕೇರ್/ಆಫ್ ಎಂ.ಗೋವಿಂದರಾಜು ಪಡಸಾಲೆಹಟ್ಟಿ, ಮಿಡಿಗೇಶಿ, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ ಹೊಸಕರೆ ಎಂಬ ವಿಳಾಸವಿದೆ ಎಂದು ತಿಳಿದುಬಂದಿದೆ. ಮೃತರ ಬಗ್ಗೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿದ್ದ ನಯನಾ, ಬಿ.ಸಿ.ರೋಡಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಅವರು ಕುಳಿತುಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿ ಬಿ.ಸಿ.ರೋಡಿನ ಕಚೇರಿಗೆ ತಲುಪಿಸಿ ಮಾಹಿತಿ ನೀಡಿದ್ದಾರೆ.

ನದಿಯಲ್ಲಿ ತೇಲಾಡುತ್ತಿದ್ದ ಮಹಿಳೆಯ ಮೃತದೇಹವನ್ನು ಸ್ಥಳೀಯ ಮುಳುಗುತಜ್ಞ ಮಹಮ್ಮದ್ ಅವರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button