ಪಿತೃಪಕ್ಷ ಮತ್ತು ಕರ್ಣ
“ಈ ಪಿತೃ ಪಕ್ಷದಲ್ಲಿ ಆಹಾರವನ್ನು ಅರ್ಪಿಸುವವರೆಲ್ಲರೂ ಆಶೀರ್ವದಿಸಲ್ಪಡುತ್ತಾರೆ. ಭೂಮಿ ಮತ್ತು ಸ್ವರ್ಗದಲ್ಲಿ ಆಹಾರ ಪಡೆಯುವ ಅದೃಷ್ಟವಿಲ್ಲದವರನ್ನು ಕೂಡಾ ತಲುಪುತ್ತಾರೆ. ಈ ಪಕ್ಷದಲ್ಲಿ ಆಹಾರ ಅರ್ಪಿಸಿ ಪಡೆದ ಆಶೀರ್ವಾದ 21 ತಲೆಮಾರುಗಳ ವರೆಗೆ ಉತ್ತಮವಾಗಿರುತ್ತದೆ.”

Views: 77
ಮಹಾಭಾರತ ಯುದ್ಧದಲ್ಲಿ ಅವಸಾನ ಹೊಂದಿದ ಮಹಾರಥಿ ಕರ್ಣನನ್ನು ಯಮ ಸ್ವರ್ಗಲೋಕದಲ್ಲಿ ಗೌರವಾದರಗಳಿಂದ ಬರಮಾಡಿಕೊಂಡ. ಮಹಾಪರಾಕ್ರಮಿಯೂ ದಾನಶೂರನೂ ಆಗಿದ್ದವನು ಕರ್ಣ. ಒಂದು ಕೈಯಲ್ಲಿ ಮಾಡಿದ ದಾನ ಮತ್ತೊಂದು ಕೈಗೆ ತಿಳಿಯಬಾರದು ಎನ್ನುವ ಧ್ಯೇಯವನ್ನು ಪಾಲಿಸುತ್ತಿದ್ದ ಮಹಾ ದಾನಿ ಕರ್ಣ. ಪುಣ್ಯವಂತನಾಗಿದ್ದ ಕರ್ಣ ಸ್ವರ್ಗದ ಸುಖವನ್ನು ಅನುಭವಿಸಬಹುದೆಂದು ಯಮ ಅಪ್ಪಣೆ ಮಾಡಿದ. ಕರ್ಣನೂ ಸಂತೋಷದಿಂದ ಸ್ವರ್ಗಲೋಕದ ಸವಿಯನ್ನು ಅನುಭವಿಸತೊಡಗಿದನು.
ಕೆಲವು ಸಮಯದ ನಂತರ ಕರ್ಣನಿಗೆ ಹಸಿವಾಯಿತು. ಅನ್ನಾಹಾರಗಳು ಸಿಗುವ ಸ್ಥಳ ಯಾವುದೆಂದು ಕರ್ಣ ಉಳಿದ ಸ್ವರ್ಗವಾಸಿಗಳನ್ನು ವಿಚಾರಿಸಿದ. ಅದನ್ನು ಕೇಳಿದ ಸ್ವರ್ಗವಾಸಿಗಳಿಗೆ ಆಶ್ಚರ್ಯವಾಯಿತು. ಸ್ವರ್ಗಲೋಕದಲ್ಲಿ ಹಸಿವೆಯಾಗುವ ಪ್ರಮೇಯವೇ ಇಲ್ಲ; ಅವರಿಗೆ ಯಾವುದೇ ಆಹಾರದ ಅಗತ್ಯವಿಲ್ಲ ಎಂದು ಕರ್ಣನಿಗೆ ತಿಳಿಸಿದರು. ಆದರೆ ಕರ್ಣನಿಗೆ ನಿಜವಾಗಿಯೂ ಹಸಿವು ಆಗಿತ್ತು. ಇದನ್ನು ಗಮನಿಸಿದ ದೇವಗುರು ಬೃಹಸ್ಪತಿ ತಮ್ಮ ದಿವ್ಯಜ್ಞಾನದಿಂದ ವಿಷಯ ತಿಳಿದುಕೊಂಡು, ಕರ್ಣನಿಗೆ ತನ್ನ ತೋರುಬೆರಳನ್ನು ನೆಕ್ಕುವಂತೆ ಹೇಳಿದರು. ಕರ್ಣ ಹಾಗೆಯೇ ಮಾಡಲು ಅವನ ಹಸಿವು ಇಂಗಿತು. ಆಶ್ಚರ್ಯಚಕಿತನಾದ ಕರ್ಣ ಇಂತಹ ವಿದ್ಯಮಾನಕ್ಕೆ ಕಾರಣವೇನೆಂದು ಗುರುಗಳನ್ನು ಕೇಳಿದ. ಗುರುಗಳು ವಿವರಿಸಿದರು: “ಕರ್ಣ, ನೀನು ಭೂಮಿಯ ಮೇಲೆ ಜೀವಿಸಿರುವಾಗ ಮಹಾದಾನಿಯಾಗಿದ್ದೆ; ದಾನಶೂರ ಕರ್ಣ ಎನ್ನುವ ಬಿರುದು ಪಡೆದಿದ್ದೆ. ಆದರೆ ನೀನು ದಾನಗಳಲ್ಲಿ ಅಗ್ರಗಣ್ಯ ಎನಿಸಿಕೊಳ್ಳುವ ಅನ್ನದಾನದತ್ತ ಒಲವು ತೋರಲಿಲ್ಲ. ಒಮ್ಮೆ ಒಬ್ಬ ಬಡ ಬ್ರಾಹ್ಮಣನು ನಿನ್ನ ಮನೆಗೆ ಬಂದು ಅನ್ನದಾನ ಬೇಡಿದನು. ಆದರೆ ನೀನು ಅನ್ನದಾನ ಮಾಡದೆ, ಅನ್ನದಾನ ಮಾಡುವ ಸ್ಥಳವನ್ನು ನಿನ್ನ ತೋರುಬೆರಳಿನಿಂದ ತೋರಿಸಿದಿ. ಬ್ರಾಹ್ಮಣನು ಅಲ್ಲಿಗೆ ಹೋಗಿ ಆಹಾರವನ್ನು ಸ್ವೀಕರಿಸಿ ತನ್ನ ಹಸಿವೆಯನ್ನು ನೀಗಿಸಿಕೊಂಡ. ಆ ಅನ್ನದಾನದ ಪುಣ್ಯ ನಿನ್ನ ತೋರುಬೆರಳಿನಲ್ಲಿ ಸಂಚಯಿಸಿತ್ತು. ಭೂಲೋಕದಲ್ಲಿ ನೀನು ಅನ್ನದಾನ ಮಾಡದಿದ್ದುದರಿಂದ ನಿನಗೆ ಇಲ್ಲಿ ಹಸಿವು ಕಾಣಿಸಿಕೊಂಡಿತು ಮತ್ತು ನಿನ್ನ ತೋರುಬೆರಳಿನ ಪುಣ್ಯವನ್ನು ಚೀಪಿದ್ದರಿಂದ ನಿನ್ನ ಹಸಿವು ಮಾಯವಾಯಿತು. ಇನ್ನು ಮೇಲೆ ನಿನಗೆ ಹಸಿವಿನ ಬಾಧೆಯಿರುವುದಿಲ್ಲ.”
ತನ್ನನ್ನು ಹಸಿವು ಬಾಧಿಸಿದ ಕಾರಣ ತಿಳಿದ ಕರ್ಣ ಕಣ್ಣೀರು ಸುರಿಸಿದ. ಯಮನ ಬಳಿಗೆ ಓಡಿ, ತನ್ನನ್ನು ಮಾನವ ರೂಪದಲ್ಲಿ ಒಂದು ಪಕ್ಷಕಾಲ (ಹದಿನೈದು ದಿನಗಳು) ಭೂಲೋಕಕ್ಕೆ ಕಳುಹಿಸಿ ಕೊಡುವಂತೆ ಬೇಡಿಕೊಂಡ. ಯಮ ಕಾರಣ ಕೇಳಿದ. ಅನ್ನದಾನ ಮಾಡದ ತಾನು ಒಂದು ಪಕ್ಷಕಾಲ ಅನ್ನದಾನವನ್ನು ಮಾತ್ರ ಮಾಡಲು ಬಯಸುವುದಾಗಿ ವಿನೀತನಾಗಿ ಹೇಳಿದ. ಭಾವಪರವಶನಾದ ಯಮ ಕರ್ಣನ ಬೇಡಿಕೆಗೆ ಅಸ್ತು ಎಂದನು.
ಮತ್ತೆ ಭೂಮಿಗೆ ಬಂದ ಕರ್ಣ ತನ್ನನ್ನು ಯಾರೂ ಗುರುತಿಸಲಾಗದ ಸ್ಥಳದಲ್ಲಿ ನಿಂತು ಒಂದು ಪಕ್ಷದ ಕಾಲ ಅನ್ನದಾನ ಮಾಡಿದ. ಹದಿನೈದು ದಿನಗಳ ಬಳಿಕ ಯಮ ಅಲ್ಲಿಗೆ ಬಂದು ಮರ್ತ್ಯ ದೇಹವನ್ನು ತ್ಯಜಿಸಿ ತನ್ನೊಂದಿಗೆ ಬರಬೇಕು ಎಂದು ಹೇಳಿದ. ಕರ್ಣ ಯಾವುದೇ ಪ್ರತಿರೋಧ ತೋರದೆ ಯಮನೊಂದಿಗೆ ಹೊರಟು ನಿಂತ. ಯಮನಿಗೆ ಸಂತೋಷವಾಯಿತು. “ಕರ್ಣ, ನಿನಗೆ ಮೆಚ್ಚಿದ್ದೇನೆ. ಬೇರೆ ಯಾರಾದರೂ ಆಗಿದ್ದರೆ ಭೂಲೋಕದಲ್ಲಿ ಇನ್ನೂ ಹೆಚ್ಚು ಸಮಯ ಉಳಿದುಕೊಳ್ಳಲು ಬಯಸುತ್ತಿದ್ದರು. ನೀನು ಮಾತ್ರ ಯಾವ ಉದ್ದೇಶಕ್ಕೆ ಭೂಮಿಗೆ ಬಂದೆಯೋ ಅದನ್ನೇ ನೆರವೇರಿಸುತ್ತಾ, ನಾನು ಕರೆದ ತಕ್ಷಣ ನನ್ನೊಂದಿಗೆ ಹೊರಟಿರುವೆ. ಆದ್ದರಿಂದ ನಿನಗೆ ಒಂದು ವರವನ್ನು ನೀಡುತ್ತೇನೆ. ಬೇಕಾದ ವರವನ್ನು ಕೇಳು” ಎಂದು ಯಮ ಹೇಳಿದ.
ಪ್ರತಿಯಾಗಿ ಕರ್ಣ ಬೇಡಿಕೊಂಡ: “ಮಹಾಪ್ರಭು, ಭೂಮಿಯ ಅನೇಕ ಜನರು ತಮ್ಮ ಪೂರ್ವಜರಿಗೆ ಅಥವಾ ಯಾರಿಗಾದರೂ ಆಹಾರವನ್ನು ನೀಡಲು ಮರೆತಿರುತ್ತಾರೆ. ಆದ್ದರಿಂದ ಪಿತೃಪಕ್ಷದಲ್ಲಿ ಯಾರಾದರೂ ಆಹಾರವನ್ನು ಅರ್ಪಿಸಿದರೆ, ಸಂತಾನದಿಂದ ವಂಚಿತರಾದ ಪೂರ್ವಜರು ಅಥವಾ ಅತೃಪ್ತ ಆತ್ಮಗಳನ್ನು ತಲುಪಿ ಅವರಿಗೆ ತೃಪ್ತಿಯಾಗುವಂತೆ ಅನುಗ್ರಹಿಸಿರಿ.” ಯಮನು ಸಂತೋಷದಿಂದ ಅನುಗ್ರಹಿಸಿದ:“ಈ ಪಿತೃ ಪಕ್ಷದಲ್ಲಿ ಆಹಾರವನ್ನು ಅರ್ಪಿಸುವವರೆಲ್ಲರೂ ಆಶೀರ್ವದಿಸಲ್ಪಡುತ್ತಾರೆ. ಭೂಮಿ ಮತ್ತು ಸ್ವರ್ಗದಲ್ಲಿ ಆಹಾರ ಪಡೆಯುವ ಅದೃಷ್ಟವಿಲ್ಲದವರನ್ನು ಕೂಡಾ ತಲುಪುತ್ತಾರೆ. ಈ ಪಕ್ಷದಲ್ಲಿ ಆಹಾರ ಅರ್ಪಿಸಿ ಪಡೆದ ಆಶೀರ್ವಾದ 21 ತಲೆಮಾರುಗಳ ವರೆಗೆ ಉತ್ತಮವಾಗಿರುತ್ತದೆ.”ಹೀಗೆಂದ ಯಮ ಕರ್ಣನೊಂದಿಗೆ ಸ್ವರ್ಗಲೋಕ ಸೇರಿಕೊಂಡ.
(ಅನುವಾದ)
ನಾರಾಯಣ ಶೆಟ್ಟಿಗಾರ್, ಬೆಂಗಳೂರು