ಜನಮನ

ನಾಳೆ ಕರ್ನಾಟಕ ಬಂದ್

Views: 189

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ಕನ್ನಡ ಒಕ್ಕೂಟದ ಅಖಂಡ ಕರ್ನಾಟಕ ಬಂದ್ ಕರೆಗೆ 100 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ನಾಳೆ ರಾಜ್ಯ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆಗಳಿವೆ.

ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಬಂದ್ ಯಶಸ್ವಿಯಾದ ಬೆನ್ನಲ್ಲೆ ನಾಳೆ ಕರ್ನಾಟಕ ಬಂದ್ ನಡೆಯತ್ತಿದ್ದು, ಈ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿ ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿವೆ.

ನಾಳಿನ ಅಖಂಡ ಕರ್ನಾಟಕ ಬಂದ್ ಸಂದರ್ಭದಲ್ಲಿ ವಾಹನ ಸಂಚಾರ, ಅಂಗಡಿ-ಮುಂಗಟ್ಟು, ಹೋಟೆಲ್, ಚಿತ್ರಮಂದಿರ ಎಲ್ಲವೂ ಬಂದ್ ಆಗಲಿದ್ದು, ವ್ಯಾಪಾರ ವಹಿವಾಟು ಸಹ ಸ್ಥಗಿತಗೊಳ್ಳಲಿದೆ. ಅಖಂಡ ಕರ್ನಾಟಕ ಬಂದ್‌ಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದೆ ಎಂದು ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ನಾಳೆ ಅಖಂಡ ಕರ್ನಾಟಕ ಬಂದ್ ಆಗುತ್ತದೆ. ಶಾಂತಿಯುತವಾಗಿ ಬಂದ್ ನಡೆಯಲಿದ್ದು, ಬಂದ್ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನಾ ರ್‍ಯಾಲಿ, ಧರಣಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್‌ಶೆಟ್ಟಿ ತಿಳಿಸಿದ್ದಾರೆ.

ನಾಳಿನ ಕರ್ನಾಟಕ ಬಂದ್‌ಗೆ ಹೋಟೆಲ್ ಉದ್ಯಮ, ಚಲನಚಿತ್ರ ವಾಣಿಜ್ಯ ಮಂಡಳಿ, ಆಟೋ ಸಂಘಟನೆಗಳು, ಖಾಸಗಿ ಸಾರಿಗೆಯ ಸಂಘಟನೆ, ವೋಲಾ ಊಬರ್ ಸಂಘ, ಖಾಸಗಿ ಬಸ್‌ಗಳ ಮಾಲೀಕರ ಸಂಘ, ಸರಕು ಸಾಗಣೆ ವಾಹನಗಳ ಸಂಘ, ಚಲನಚಿತ್ರೋದ್ಯಮ, ಕೈಗಾರಿಕೆಗಳು, ವ್ಯಾಣಿಜ್ಯೋದ್ಯಮಿಗಳ ಸಂಘ, ವರ್ತಕರ ಸಂಘ ಹೀಗೆ ಎಲ್ಲ ಸಂಘ ಸಂಸ್ಥೆಗಳು ಬೆಂಬಲ ಘೋಷಿಸಿದ್ದು, ನಾಳೆ ಬಹುತೇಕ ಕರ್ನಾಟಕ ಸ್ತಬ್ಧವಾಗಲಿದೆ.

ಶಾಲಾ-ಕಾಲೇಜು ರಜೆ: ಡಿಸಿಗಳ ವಿವೇಚನೆಗೆ

ನಾಳಿನ ಅಖಂಡ ಕರ್ನಾಟಕ ಬಂದ್ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ಈಗಾಗಲೇ ಖಾಸಗಿ ಶಾಲೆಗಳ ಒಕ್ಕೂಟ, ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಘೋಷಿಸಿದೆ.

ನಾಳೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಓಡಾಟ ಇರಲಿದೆ ಎಂದು ಸಾರಿಗೆ ಸಂಸ್ಥೆ ಹೇಳಿದೆಯಾದರೂ ಬಸ್‌ಗಳ ಓಡಾಟ ಅನುಮಾನವಾಗಿದೆ.

ಬಂದ್‌ಗೆ ಜನ ಬೆಂಬಲ ವ್ಯಕ್ತವಾಗಿರುವುದರಿಂದ ಪ್ರಯಾಣಿಕರಿಲ್ಲದೆ ಸಾರಿಗೆ ಬಸ್‌ಗಳ ಓಡಾಟ ಸಹ ವಿರಳವಾಗುವ ಸಾಧ್ಯತೆಗಳು ಇವೆ.

ನಾಳಿನ ಬಂದ್‌ಗೆ ಆಟೋ, ಟ್ಯಾಕ್ಸಿ, ವೋಲಾ ಊಬರ್ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಆಟೋ-ಟ್ಯಾಕ್ಸಿಗಳ ಓಡಾಟವೂ ಸ್ಥಗಿತಗೊಳ್ಳಲಿವೆ.

ಥಿಯೇಟರ್ ಬಂದ್

ನಾಳಿನ ಕರ್ನಾಟಕ ಬಂದ್‌ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿದ್ದು, ನಾಳೆ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಹಾಗೆಯೇ ರಾಜ್ಯಾದ್ಯಂತ ಎಲ್ಲ ಸಿನಿಮಾ ಮಂದಿರಗಳು ಬಂದ್ ಆಗಲಿವೆ.

ನಾಳಿನ ಬಂದ್ ಹಿನ್ನೆಲೆಯಲ್ಲಿ ಈ ವಾರ ಸಿನಿಮಾಗಳ ಬಿಡುಗಡೆಯನ್ನು ಮುಂದೂಡುವಂತೆ ನಿರ್ಮಾಪಕರ ಜತೆ ಮಾತನಾಡಲಾಗಿದೆ ಎಂದು ಕರ್ನಾಟಕ ನಿರ್ಮಾಪಕರ ಸಂಘದ ಉಮೇಶ್ ಬಣಕಾರ್ ಹೇಳಿದ್ದಾರೆ.

ನಟ-ನಟಿಯರ ಬೆಂಬಲ

ನಾಳಿನ ಬಂದ್‌ಗೆ ಕನ್ನಡ ಚಲನಚಿತ್ರದ ಎಲ್ಲ ಪ್ರಮುಖ ನಟ-ನಟಿಯರು ಬೆಂಬಲ ನೀಡಿದ್ದು, ಕಾವೇರಿ ನೀರಿಗಾಗಿ ನಾಳೆ ಕಲಾವಿದರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ.

ರಸ್ತೆತಡೆ     ನಾಳಿನ ಬಂದ್‌ಗೆ ಕರ್ನಾಟಕ ರೈತ ಸಂಘವು ಬೆಂಬಲ ನೀಡಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಹೇಳಿದೆ.

ಹಲವು ಸಂಘಟನೆಗಳು ನಾಳೆ ವಿವಿಧೆಡೆ ರಸ್ತೆ ಟೋಲ್‌ಗಳಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದು, ರಸ್ತೆ ತಡೆ ಚಳವಳಿ ಎಲ್ಲ ಜಿಲ್ಲೆಗಳಲ್ಲು ನಡೆಯುವ ಸಾಧ್ಯತೆಗಳಿವೆ.

ಬೃಹತ್ ರ್‍ಯಾಲಿ

ನಾಳಿನ ಕರ್ನಾಟಕ ಬಂದ್ ಸಂದರ್ಭದಲ್ಲಿ ಕನ್ನಡ ಒಕ್ಕೂಟ ನಾಳೆ ಬೆಳಿಗ್ಗೆ11;30ಕ್ಕೆ ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೂ ಬೃಹತ್ ರ್‍ಯಾಲಿಯನ್ನು ನಡೆಸಲಿದೆ.ನಾಳಿನ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಇಂದು ರಾತ್ರಿ 10 ಗಂಟೆಯಿಂದಲೇ ಬಂದ್ ಆಗಲಿದ್ದು, ನಾಳೆ ರಾತ್ರಿ 10ರ ವರೆಗೂ ತಮಿಳುನಾಡಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ಬಸ್‌ಗಳು ಸಂಚರಿಸಲ್ಲ.

ಬಂದ್ ಹಿನ್ನೆಲೆಯಲ್ಲಿ ಪ್ರಮುಖ ಹೆದ್ದಾರಿಗಳಲ್ಲಿ ರಸ್ತೆತಡೆ ಚಳವಳಿ ಸಹ ನಡೆಯಲಿದ್ದು, ಬಹುತೇಕ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಅಡೆತಡೆ ಎದುರಾಗುವ ಸಾಧ್ಯತೆಗಳು ಇವೆ.

ನಾಳಿನ ಬಂದ್ ಹಿನ್ನೆಲೆಯಲ್ಲಿ ತಮಿಳುನಾಡು ಗಡಿ ರಸ್ತೆಗಳನ್ನು ಬಂದ್ ಮಾಡಲು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ನಾಳಿನ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅದೇ ರೀತಿ ತುಮಕೂರು, ದಾವಣಗೆರೆ ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳನ್ನು ಮುಂದೂಡಲಾಗಿದೆ.

ನಾಳಿನ ಬಂದ್: ಏನಿರಲ್ಲ..

ಖಾಸಗಿ ಬಸ್‌ಗಳು

ಆಟೋ ಕ್ಯಾಬ್

ಸರಕು ಸಾಗಣೆ ವಾಹನಗಳು

ಥಿಯೇಟರ್

ಸೂಪರ್ ಮಾರ್ಕೆಟ್

ಪೆಟ್ರೋಲ್ ಬಂಕ್

ಹೋಟೆಲ್‌ಗಳು

ಮಾಲ್‌ಗಳಉ

ಅಂಗಡಿಗಳು

ಕೈಗಾರಿಕೆಗಳು

ಸೂಪರ್ ಮಾರ್ಕೆಟ್

ಓಲಾ ಊಬರ್

ಶಾಲಾ ವಾಹನಗಳು

ಆಭರಣ ಮಳಿಗೆಗಳು

ಏನಿರುತ್ತೆ..

ಆಸ್ಪತ್ರೆಗಳು

ಔಷಧಿ ಅಂಗಡಿಗಳು

ಹಾಲು, ತರಕಾರಿ, ದಿನಸಿ ಅಂಗಡಿಗಳು

ಮೆಟ್ರೋ

ಆಂಬ್ಯುಲೆನ್ಸ್ ಸೇವೆ

ಬ್ಯಾಂಕ್‌ಗಳು

ಪೊಲೀಸ್ ಸರ್ಪಗಾವಲು

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ಥ್ ಕೈಗೊಳ್ಳಲಾಗಿದೆ.

ಅದರಲ್ಲೂ ಕಾವೇರಿ ಜಲಾನಯನ ಪ್ರದೇಶಗಳಾದ ಮೈಸೂರು, ಮಂಡ್ಯ, ತುಮಕೂರು ಇನ್ನಿತರ ಜಿಲ್ಲೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು,ನಗರದಲ್ಲಿ ಡಿಸಿಪಿಗಳು,ಜಿಲ್ಲೆಗಳಲ್ಲಿ ಎಸ್ ಪಿಗಳು ಭದ್ರತೆಯ ನಿಗಾ ವಹಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ನಾಳೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂದ್ ಸಂದರ್ಭದಲ್ಲಿ ಯಾರಾದರೂ ಬಲವಂತವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಲು ಯತ್ನಿಸಿದರೆ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಸಿದ್ದಾರೆ.

ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ನಗರದ ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಉಪ ವಲಯದ ಎಸಿಪಿಗಳು, ಠಾಣೆಗಳ ಇನ್ಸ್‌ಪೆಕ್ಟರ್ ಗಳು ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದು ಬೇರೆ ಜಿಲ್ಲೆಗಳಿಂದಲೂ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಮುನ್ನೆಚ್ಚರಿಕೆ ಕ್ರಮವಾಗಿ ಕ್ಷಿಪ್ರ ಕಾರ್ಯಚರಣೆ ಪಡೆ (ಆರ್ ಎಎಫ್) 3 ಕಂಪನಿಗಳನ್ನು ಕರೆಸಿಕೊಳ್ಳಲಾಗಿದೆ. 60 ಕೆಎಸ್‌ಆರ್ ಪಿ ಹಾಗೂ ಸಿಎಆರ್ ತುಕಡಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಣ್ಣಪುಟ್ಟ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಂದ್‌ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಸ್ವಪ್ರೇರಣೆಯಿಂದ ಬಂದ್ ಮಾಡಬೇಕು. ಒಂದು ವೇಳೆ ಯಾರಾದರೂ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು

Related Articles

Back to top button