ಇತರೆ

ನವವಿವಾಹಿತೆ ಕ್ರಿಮಿನಾಶಕ ಸೇವಿಸಿ ಅತ್ಮಹತ್ಯೆ: ಆಕೆಯ ಸಮಾಧಿ ಬಳಿ ವಿಷ ಕುಡಿದ ಗಂಡ

Views: 132

ಹೈದರಾಬಾದ್​: ನವವಿವಾಹಿತೆಯೊಬ್ಬಳು ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾದ ಸುದ್ದಿ ಕೇಳಿ ಆಕೆಯ ಗಂಡನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ತೆಲಂಗಾಣದ ಆದಿಲಬಾದ್​ನಲ್ಲಿ ನಡೆದಿದೆ.

ಮೃತ ನವದಂಪತಿಯನ್ನು ವಿಜಯ್​ (28) ಮತ್ತು ಪಲ್ಲವಿ (20) ಎಂದು ಗುರುತಿಸಲಾಗಿದೆ. ಕ್ರಿಮಿನಾಶಕ ಸೇವಿಸಿದ್ದ ಪಲ್ಲವಿಯನ್ನು ಆದಿಲಬಾದ್​ನಲ್ಲಿರುವ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್​)ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಆದಿಲಬಾದ್​ ಪೊಲೀಸರ ಪ್ರಕಾರ ಪಲ್ಲವಿ, ಶುಕ್ರವಾರ ಕ್ರಿಮಿನಾಶಕ ಸೇವನೆ ಮಾಡಿದ್ದಳು. ಶನಿವಾರ ಬೆಳಗ್ಗೆ ಅಸುನೀಗಿದ್ದಾಳೆ. ಸಾವಿನ ಸುದ್ದಿ ಕೇಳಿದ ವಿಜಯ್​, ಎಲ್ಲರ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದು ಹೆದರಿ, ಕೀಟನಾಶಕ ಸೇವಿಸಿ ಮಣ್ಣು ಮಾಡುವ ಜಾಗಕ್ಕೆ ತೆರಳಿ ಪತ್ನಿಯ ಬಳಿಯಲ್ಲೇ ಕೊನೆಯುಸಿರೆಳೆದಿದ್ದಾನೆ. ಇಬ್ಬರು ಕಳೆದ ವರ್ಷ ಮೇ 23ರಂದು ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು.

ದಂಪತಿ ನಡುವೆ ಯಾವುದೇ ಕಲಹವಾಗಲಿ ಅಥವಾ ಭಿನ್ನಾಭಿಪ್ರಾಯವಾಗಲಿ ಇರಲಿಲ್ಲ. ಇಬ್ಬರು ಸುಂದರ ಜೀವನವನ್ನು ಸಾಗಿಸುತ್ತಿದ್ದರು. ಪಲ್ಲವಿಗೆ ಗಂಡನ ಮನೆ ಕೊಲ್ಹಾರಿಯಲ್ಲಿ ವಾಸಿಸಲು ಆಸಕ್ತಿ ಇರಲಿಲ್ಲ. ಹೀಗಾಗಿ ಮನೆಯಿಂದ ದೂರ ಉಳಿದಿದ್ದಳು. ಶುಕ್ರವಾರ ಆಕೆಯನ್ನು ಆಕೆಯ ಸಹೋದರ ಕೊಲ್ಹಾರಿಗೆ ಡ್ರಾಪ್ ಮಾಡಿದ್ದ. ಈ ವೇಳೆ ಕೀಟನಾಶಕ ಬಾಟಲಿ ತೆಗೆದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Back to top button