ನನ್ನ ಹೋರಾಟ ನಿಲ್ಲಲ್ಲ ಎಂದ ಯತ್ನಾಳ್: ಉಚ್ಛಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ

Views: 220
ಕನ್ನಡ ಕರಾವಳಿ ಸುದ್ದಿ: ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ. ಸತ್ಯವಂತರಿಗಿದು ಕಾಲವಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಪಕ್ಷದ ಒಳಗಿನ ಸರ್ವಾಧಿಕಾರ, ಭ್ರಷ್ಟಾಚಾರ ಬಗ್ಗೆ ಮಾತಾಡಿದ್ದಕ್ಕೆ ಆರು ವರ್ಷ ಉಚ್ಛಾಟನೆ ಮಾಡಿದ್ದಾರೆ. ಪಕ್ಷದ ಒಳಗಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಜೆಂಡಾ ಯಶಸ್ವಿಯಾಗಿ ಸಾಧಿಸಿಕೊಂಡಿವೆ. ಈ ಉಚ್ಛಾಟನೆಯಿಂದ ನಾನು ನನ್ನ ಹೋರಾಟ ನಿಲ್ಲಿಸಲ್ಲ, ಕುಂದಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರುದ್ಧ ಹಾಗೂ ಹಿಂದುತ್ವ ಮತ್ತು ಉತ್ತರ ಕರ್ನಾಟಕ ಪರ ನನ್ನ ಹೋರಾಟ ನಿರಂತರ ಇರುತ್ತದೆ ಎಂದಿದ್ದಾರೆ ಯತ್ನಾಳ್
ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ
ಇತ್ತ ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ವಿಜಯಪುರದಲ್ಲಿ ಬೆಂಬಲಿಗರ ರಾಜೀನಾಮೆ ಪರ್ವ ಆರಂಭವಾಗಿದೆ. ವಿಜಯಪುರ ಬಿಜೆಪಿ ನಗರ ಒಬಿಸಿ ಮೋರ್ಚಾ ಸ್ಥಾನಕ್ಕೆ ಭೀಮು ಮಾಶ್ಯಾಳ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ನಗರ ಮಂಡಳ ಅಧ್ಯಕ್ಷರಾದ ಹೂಗಾರ್ ಸಹ ವಾಟ್ಸಪ್ ಮೂಲಕ ರಾಜೀನಾಮೆ ರವಾನಿಸಿದ್ದಾರೆ. ಯತ್ನಾಳ್ ಅವರ ಉಚ್ಛಾಟನೆಗೆ ವಿಜಯಪುರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಪಕ್ಷವನ್ನೇ ತೊರೆಯುವ ನಿರ್ಧಾರ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ಪಕ್ಷದ ಈ ನಿರ್ಧಾರದ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಯತ್ನಾಳ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.