ರಾಜಕೀಯ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಾಗರಾಜ್ ಶೆಟ್ಟಿ ಹೆಸರು ಮುನ್ನೆಲೆಗೆ 

Views: 85

ಮಂಗಳೂರು:ದಕ್ಷಿಣ ಕನ್ನಡ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರ ವಿರುದ್ಧ ಕಾರ್ಯಕರ್ತರ ಅಸಮಾಧಾನ,ಅರುಣ್ ಕುಮಾರ್ ಪುತ್ತಿಲ ಹೆಸರು ಪ್ರಸ್ತಾಪದ ಹಿನ್ನಲೆಯಲ್ಲಿ ಜಿಲ್ಲೆಯ ಸಂಸತ್ ಸದಸ್ಯ ಸ್ಥಾನಕ್ಕೆ ಅಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈಗ ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ ಮಾಜಿ ಸಚಿವ ಬಿ‌.ನಾಗರಾಜ ಶೆಟ್ಟಿಯವರ ಹೆಸರು ಮುನ್ನೆಲೆಗೆ ಬಂದಿದೆ.

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ,ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕರಾಗಿ, ಮಾಜಿ ಸಚಿವರಾಗಿಯೂ ಬಿ.ನಾಗರಾಜ ಶೆಟ್ಟಿ ವರ್ಚಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ನಂತರದ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಮುನಿಸಿಗೊಂಡು ಬಳಿಕ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಬಳಿಕ ಮತ್ತೆ ಬಿಜೆಪಿಯಲ್ಲಿ ಗುರುತಿಸಿಗೊಂಡು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಆದರೆ ಇತ್ತೀಚೆಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯ ಜನರನ್ನು ಮನಗೆದ್ದ ನಾಯಕರೆನಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಬಿ ನಾಗರಾಜ ಶೆಟ್ಟಿಯವರು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ್ದು, ನಾನು ಸಂಸದ ಸ್ಥಾನದ ಆಕಾಂಕ್ಷಿ. ಕಾರ್ಯಕರ್ತರು, ಪಕ್ಷದ ಹಿರಿಯರು ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಮೋದಿಯವರ ಕೈ ಬಲಗೊಳಿಸಲು ನಾನು ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಸಂಘದ ಹಿರಿಯರು ನನಗೆ ಟಿಕೆಟ್ ಕೊಟ್ಟರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ತಮಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದಲ್ಲಿ ನಿಮ್ಮ ಹೆಸರನ್ನೇ ಸೂಚಿಸುತ್ತೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ ಅವರೇ ಹೇಳಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇನ್ನು ಈ ಹಿಂದೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರೇ ಮುಂದಿನ ಲೋಕಸಭಾ ಅಭ್ಯರ್ಥಿ ಎಂದಿದ್ದರು. ಮುಂದಿನ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಗೆಲ್ಲಿಸುವ ಕೆಲಸ ಮಾಡಬೇಕಿದೆ. ಅವರ ಪರವಾಗಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ನನ್ನ ಅಧಿಕಾರದ ಕೊನೆಯ ದಿನದವರೆಗೂ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಕಾರ್ಯಕರ್ತರಿಗೆ ಬಿ.ವೈ ವಿಜಯೇಂದ್ರ ಭರವಸೆ ನೀಡಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷಾಂತರವಾಗಿ ಸ್ಪರ್ಧಿಸಿ ಹೆಚ್ಚು ಮತ ಗಳಿಸಿದ್ದು ನಂತರ ನಡೆದ ಪಂಚಾಯತ್ ಉಪ ಚುನಾವಣೆ ಸಮರದಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ಇಳಿಸಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಲೋಕಸಭಾ ಟಿಕೆಟ್‌ ನೀಡಬೇಕು ಎನ್ನುವ ಆಗ್ರಹ ಜೋರಾಗಿದೆ. ಈ ಹಿಂದೆ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಡುವಿನ ಅಸಮಾಧಾನದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು.

Related Articles

Back to top button