ಜುಲೈ 12 : ಕೇಂದ್ರ ಸಚಿವ ಸಂಪುಟ ಪುನಾರಚನೆ?

Views: 0
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರದಲ್ಲಿ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ.
ಇದೇ ಜುಲೈ 12 ರಂದು ಕೇಂದ್ರ ಸಚಿವ ಸಂಪುಟ ಪುನಾರಚನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿಯಲ್ಲಿರುವಾಗ ಕೇಂದ್ರದ ಕೆಲವು ಸಚಿವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಜತೆಗೆ ಸಮುದಾಯ, ಜಾತಿ ಆಧರಿಸಿ ಕೆಲವು ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಯೋಚಿಸಿದ್ದು, ಲೋಕ ಜನಾ ಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಎನ್ ಡಿಎ ಮೈತ್ರಿಕೂಟದ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಇದೇ ಜುಲೈ 18ಕ್ಕೆ ಎನ್ ಡಿಎ ಸಭೆ ಸೇರಲಿದೆ. ಇದೇ ದಿನ ಮಹಾರಾಷ್ಟ್ರದ ಶಿಂದೆ ಬಣ, ಬಿಹಾರದ ಲೋಕ ಶಕ್ತಿ ಪಕ್ಷ ಕೂಡ ಎನ್‌ಡಿಎ ಮೈತ್ರಿಕೂಟ ಸೇರಿಕೊಳ್ಳಲಿದೆ.
ವರ್ಷಾಂತ್ಯದಲ್ಲಿ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್ಗಡ್ ,ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.ಆ ಕಾರಣಕ್ಕಾಗಿ ರಾಜಸ್ಥಾನ, ತೆಲಂಗಾಣ ದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇಮಕವೂ ನಡೆದಿದೆ.
ಈ ಮಧ್ಯೆ ಕರ್ನಾಟಕದಲ್ಲಿ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೂತನ ನಾಯಕನ ಹೆಸರನ್ನು ಆಯ್ಕೆಗಾಗಿ ವರಿಷ್ಠರು ಪ್ರಸ್ತಾಪಿಸಿದ್ದು ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ ಒಪ್ಪಿಗೆ ನೀಡದೇ ತಮ್ಮ ಆಪ್ತರನ್ನೇ ಆಯ್ಕೆ ಮಾಡಬೇಕು ಎಂಬ ಬೇಡಿಕೆಯಿಂದ ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗಿ, ಬಸವರಾಜ ಬೊಮ್ಮಾಯಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಂಭವ ಹೆಚ್ಚಿದೆ.