SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ಬದಲು ಅಂಕ ನೀಡಿ: ಹೈಕೋರ್ಟ್ ಆದೇಶ, ಫಲಿತಾಂಶ ವಿಳಂಬ?
Views: 16
ಕನ್ನಡ ಕರಾವಳಿ ಸುದ್ದಿ: ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಗ್ರೇಡಿಂಗ್ ವ್ಯವಸ್ಥೆಯನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್.ನಾಯ್ಕ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಆರ್.ವಿ. ನಾಯ್ಕ್ ಅವರ ವಾದ ಪುರಸ್ಕರಿಸಿರುವ ನ್ಯಾಯಪೀಠ, 2025-26ನೇ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡಬೇಕೆಂದು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಅಧಿಸೂಚನೆ ಹೊರಡಿಸಿತ್ತು.
ಹಿಂದಿಗೆ ಅಂಕದ ಬದಲು ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ಕನ್ನಡಪರ ಸಂಘಟನೆಗಳು, ಸಾಹಿತಿ, ಲೇಖಕರು ಬೆಂಬಲ ವ್ಯಕ್ತಪಡಿಸಿದ್ದರು. ದೇಶಿಯ ಭಾಷೆಗಳ ಹಿತರಕ್ಷಣಾ ಒಕ್ಕೂಟ ಹಾಗೂ ಬಿಜೆಪಿಯ ನಾಯಕರು ತೀವ್ರ ವಿರೋಧವನ್ನು ತೋರಿದ್ದರು.
ಸರಕಾರ ಮೇಲ್ಮನವಿ ಸಲ್ಲಿಸಿದರೆ ಫಲಿತಾಂಶ ವಿಳಂಬ
ಒಂದು ವೇಳೆ ರಾಜ್ಯ ಸರಕಾರವೇನಾದರೂ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಅದು ಇತ್ಯರ್ಥವಾಗುವವರೆಗೆ ಫಲಿತಾಂಶ ಪ್ರಕಟಿಸಲು ಕಷ್ಟಸಾಧ್ಯ.
ಪ್ರಸ್ತುತ ಎ. 24 ರ ಹೊತ್ತಿಗೆ ಫಲಿತಾಂಶ ಪ್ರಕಟವಾಗುವುದಾಗಿ ಹೇಳಲಾಗಿತ್ತು. ಅಷ್ಟರೊಳಗೆ ವಿಭಾಗೀಯ ಪೀಠ ಇತ್ಯರ್ಥ ಪಡಿಸಿದರೆ ಸಮಸ್ಯೆಯಾಗದು.ಇಲ್ಲವಾದರೆ ವಿಳಂಬವಾಗಬಹುದು ಎಂದು ಹೇಳಲಾಗಿದೆ.






