ಗರ್ಭಿಣಿ ಅನುಮಾನಾಸ್ಪದ ಸಾವು, ಪತಿ ನಾಪತ್ತೆ

Views: 53
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರದಲ್ಲಿ ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಉತ್ತರ ಪ್ರದೇಶ ಮೂಲದ ಸುಮನಾ (22) ಮೃತಪಟ್ಟ ಗರ್ಭಿಣಿ.
ಸುಮನಾ ಅವರು ಪತಿ ಶಿವಂನೊಂದಿಗೆ ಹೆಣ್ಣೂರಿನ ಥಳಿಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಸುಮನಾ ಅವರು ಗರ್ಭಿಣಿಯಾಗಿದ್ದು, ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಪತ್ನಿಯ ಮೃತದೇಹದ ಜೊತೆಯೇ ಪತಿ ಎರಡು ದಿನ ಕಳೆದಿದ್ದಾನೆ.
ಪತ್ನಿ ಸಾವನ್ನಪ್ಪಿದ ಮೊದಲ ದಿನ ಕೆಲಸಕ್ಕೆ ಹೋಗಿ ಬಂದಿದ್ದಾನೆ. ಎರಡನೇ ದಿನ ರಾತ್ರಿ ಪತ್ನಿಯ ಮೃತದೇಹದ ಮುಂದೆ ಮದ್ಯಸೇವಿಸಿ, ಮೊಟ್ಟೆ ಪಲ್ಯ ಮಾಡಿಕೊಂಡು ಊಟ ಮಾಡಿದ್ದಾನೆ. ಮೃತದೇಹ ಕೊಳೆತು ದುರ್ವಾಸನೆ ಬರಲಾರಂಭಿಸಿದೆ. ನೆರೆಹೊರೆಯವರು ಅನುಮಾನಗೊಂಡು ಇವರ ಮನೆಗೆ ಬಂದು ನೋಡಿದಾಗ ಸುಮನಾ ಸಾವನ್ನಪ್ಪಿರುವುದು ಕಂಡುಬಂದಿದೆ. ಅಷ್ಟೊತ್ತಿಗಾಗಲೇ ಪತಿ ಶಿವಂ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ.
ಸಾವು ಹೇಗಾಗಿದೆ ಎಂಬುವುದು ನಿಗೂಢವಾಗಿದೆ. ಅವರ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮೂಗಿನಲ್ಲಿ ರಕ್ತಸ್ರಾವವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುಮನಾ ಅವರ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿವಂ ಪತ್ತೆಗೆ ಶೋಧ ಕೈಗೊಂಡಿದ್ದಾರೆ.






