ಕಾಣೆಯಾಗಿದ್ದ 8ನೇ ಖಂಡ ‘ಝೀಲ್ಯಾಂಡಿಯಾ’ 375 ವರ್ಷಗಳ ಬಳಿಕ ಪತ್ತೆ!
375 ವರ್ಷಗಳಿಂದ ಕಾಣೆಯಾಗಿದ್ದ ಜಗತ್ತಿನ 8ನೇ ಖಂಡವನ್ನ ಈಗ ವಿಜ್ಞಾನಿಗಳು ಪತ್ತೆ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಹೀಗಂತಾ ಭೂಮಿ ಮೇಲೆ ಒಂದಷ್ಟು ಜಾಗ ಹೆಚ್ಚು ಸಿಗುತ್ತೆ ಅಂತಾ ಊಹಿಸಬೇಡಿ. ಯಾಕಂದ್ರೆ ಈಗ ಪತ್ತೆಯಾದ ಹೊಸ ಹಾಗೂ 8ನೇ ಖಂಡ ಭಾಗಶಃ ನೀರಿನಲ್ಲಿ ಮುಳಗಿ ಹೋಗಿದೆ. ಹಾಗಾದರೆ ಹೊಸ ಖಂಡದ ಹೆಸರು ಏನು? ಇದು ಯಾವ ಜಾಗದಲ್ಲಿ ಪತ್ತೆಯಾಗಿದೆ? ಎಷ್ಟು ದೊಡ್ಡದಾಗಿದೆ 8ನೇ ಖಂಡ? ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Views: 163
ಭೂಮಿ ಮೇಲೆ ಜೀವಿಗಳ ಉಗಮವಾಗಿ ಕೋಟ್ಯಂತರ ವರ್ಷಗಳೇ ಕಳೆದಿದೆ. ಹೀಗೆ ಭೂಮಿ ಮೇಲೆ ಮನುಷ್ಯ ಉದಯಿಸಿ ಕೆಲವೇ ಲಕ್ಷ ವರ್ಷಗಳು ಕಳೆದಿವೆ ಅಷ್ಟೇ. ಇಂತಹ ಬೃಹತ್ ಇತಿಹಾಸ ಇರುವ ನಮ್ಮ ಭೂಮಿ ಮೇಲೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಸಂಭವಿಸಿವೆ. ಸುಮಾರು 4.5 ಬಿಲಿಯನ್ ವರ್ಷಗಳಲ್ಲಿ ಭೂಮಿ ಮೇಲೆ ಸಂಭವಿಸಿದ ಬದಲಾವಣೆಗಳಿಗೆ ಲೆಕ್ಕ ಇಲ್ಲ. ಹೀಗೆ ಭೂಮಿ ಮೇಲೆ ನಾಪತ್ತೆಯಾಗಿದ್ದ 8ನೇ ಖಂಡ ದಿಢೀರ್ ಪತ್ತೆಯಾಗಿದೆ
8ನೇ ಖಂಡ ಯಾವುದು?
ಹೊಸ ಖಂಡವನ್ನು ‘ಝೀಲ್ಯಾಂಡಿಯಾ’ ಎಂದು ಕರೆಯಲಾಗಿದೆ. ಮೊದಲಿನಿಂದ 8ನೇ ಖಂಡದ ಅಸ್ತಿತ್ವ ಇದೆ ಎಂದು ಭೂ ವಿಜ್ಞಾನಿಗಳು ವಾದಿಸುತ್ತಿದ್ದರು. ಅಲ್ಲದೆ ಇದಕ್ಕೆ ಸೂಕ್ತ ಪುರಾವೆಗಳಿಗೆ ಕಾಯುತ್ತಿದ್ದರು. ಇದೀಗ ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡ ಮಾನವರ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಮುಟ್ಟಿದೆ. ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ಎಂದು ಕರೆದಿರುವ 8ನೇ ಖಂಡವನ್ನ ಕಂಡುಹಿಡಿದಿದೆ. ಈ ಮೂಲಕ ಭೂಮಿ ಮೇಲೆ 7 ಖಂಡಗಳ ಲೆಕ್ಕಾಚಾರ ಬದಲಾಗಿ, 8ಕ್ಕೆ ಏರಿಕೆ ಕಂಡಿದೆ.
ಹೊಸ ಖಂಡ ಕಂಡುಹಿಡಿದಿದ್ದು ಹೇಗೆ?
ಮೊದಲೇ ಹೇಳಿದಂತೆ 8ನೇ ಖಂಡ ಭೂಮಿ ಮೇಲೆ ಇದೆ ಎಂದು ವಿಜ್ಞಾನಿಗಳು ವಾದಿಸುತ್ತ ಬಂದಿದ್ದರು. ಆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿರಲಿಲ್ಲ. ಆದರೆ ಇದೀಗ ಸಮುದ್ರ ಆಳದ ಹೂಳು ತೆಗೆಯುವಾಗ ಸಿಕ್ಕಿದ್ದ ಕಲ್ಲಿನ ಮಾದರಿ ಅಧ್ಯಯನ ನಡೆಸಿ, ಸಂಶೋಧಕರು ಹೊಸ ಖಂಡ ಕಂಡುಹಿಡಿದಿದ್ದಾರೆ. ಹಾಗೆ ‘ಝೀಲ್ಯಾಂಡಿಯಾ’ ವಿಸ್ತಾರ ಎಷ್ಟಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಬಿಬಿಸಿ ವರದಿ ಹೇಳುವಂತೆ, ಝೀಲ್ಯಾಂಡಿಯಾ ಖಂಡ 1.89 ಮಿಲಿಯನ್ ಚದರ ಮೈಲಿ ಅಂದ್ರೆ 4.9 ಮಿಲಿಯನ್ ಚದರ ಕಿಮೀ ವಿಶಾಲವಾಗಿ ಹರಡಿಕೊಂಡಿದೆ. ಆದ್ರೆ ಸಮುದ್ರದ ಒಳಗಡೆಯೇ ‘ಝೀಲ್ಯಾಂಡಿಯಾ’ ಖಂಡದ ಬಹುಭಾಗ ಮುಳುಗಿ ಹೋಗಿದೆ.
ಆಫ್ರಿಕಾ ಖಂಡದ ಭಾಗವಾಗಿರುವ ಮಡಗಾಸ್ಕರ್ ದ್ವೀಪಕ್ಕಿಂತ 6 ಪಟ್ಟು ದೊಡ್ಡದಾಗಿರುವ ಈ ಹೊಸ ಖಂಡ ‘ಝೀಲ್ಯಾಂಡಿಯಾ’, ವಿಶ್ವದ ಅತ್ಯಂತ ಚಿಕ್ಕದಾದ ಖಂಡ ಎಂಬ ಹೆಗ್ಗಳಿಕೆಗೆ ಇದೀಗ ಪಾತ್ರವಾಗಿದೆ. ಹಾಗೇ ತೆಳುವಾದ ಮತ್ತು ಅತೀ ಕಿರಿಯ ಖಂಡ ಎಂಬ ದಾಖಲೆಗಳನ್ನು ತನ್ನ ಹೆಸರಿಗೆ ‘ಝೀಲ್ಯಾಂಡಿಯಾ’ ಬರೆದುಕೊಂಡಿದೆ. ಝೀಲ್ಯಾಂಡಿಯಾ ಖಂಡದ ನೆಲವು ಸುಮಾರು ಶೇ. 94ರಷ್ಟು ನೀರಿನ ಒಳಗಡೆ ಇದ್ದು, ನ್ಯೂಜಿಲೆಂಡ್ ರೀತಿ ಕೆಲವು ದ್ವೀಪಗಳನ್ನ ಮಾತ್ರ ಇದು ಹೊಂದಿದೆ.
ಆಳವಾದ ಸಮುದ್ರದ ಅಕ್ಕಪಕ್ಕ ಹರಡಿಕೊಂಡಿರುವ ‘ಝೀಲ್ಯಾಂಡಿಯಾ’ ಬಗ್ಗೆ ಅಧ್ಯಯನ ಮಾಡುವುದು ಕಷ್ಟದ ಕೆಲಸವಾಗಿದೆ. ಸಮುದ್ರ ತಳದಿಂದ ಚಾಚಿದ ಬಂಡೆಗಳು ಮತ್ತು ಕೆಸರು ಮಾದರಿ ಸಂಗ್ರಹಿಸಿ ಅಧ್ಯಯನ ನಡೆಯುತ್ತಿದೆ. ಹಾಗೇ ಝೀಲ್ಯಾಂಡಿಯಾ ಖಂಡ ಮೂಲತಃ ಪುರಾತನ ಹಾಗೂ ಅತಿದೊಡ್ಡ ಖಂಡವಾಗಿದ್ದ ‘ಗೊಂಡ್ವಾನಾ’ದ ಭಾಗವಾಗಿತ್ತು ಅಂತಾ ಹೇಳಲಾಗಿದೆ. ಹೀಗೆ ಝೀಲ್ಯಾಂಡಿಯಾ ಖಂಡದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.
ಭೂಮಿ ಮೇಲೆ ಇರುವ ಖಂಡಗಳು ಯಾವುವು?
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಖಂಡ ಏಷ್ಯಾ. ಸುಮಾರು 4,40,30,000 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಏಷ್ಯಾ ಪ್ರಪಂಚದ ಮೂರನೇ ಒಂದು ಭಾಗ ಆವರಿಸಿಕೊಂಡಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಖಂಡವೂ ಇದಾಗಿದ್ದು, ಭಾರತ ಕೂಡ ಇದೇ ಏಷ್ಯಾ ಖಂಡಕ್ಕೆ ಸೇರುತ್ತದೆ. ಇದನ್ನು ಬಿಟ್ಟರೆ, ಆಫ್ರಿಕಾ ಖಂಡ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡ, ಯುರೋಪ್ ಖಂಡ, ಅಂಟಾರ್ಟಿಕಾ ಖಂಡ & ಆಸ್ಪ್ರೇಲಿಯಾ ಖಂಡಗಳು ಇಲ್ಲಿಯವರೆಗೂ ಅಸ್ತಿತ್ವದಲ್ಲಿ ಇದ್ದವು. ಇದೀಗ ‘ಝೀಲ್ಯಾಂಡಿಯಾ’ 8ನೇ ಖಂಡ ಎಂಬ ಖ್ಯಾತಿ ಪಡೆದಿದೆ.