ಏ.1ರಿಂದ ನಿಯಮ ಸಡಿಲಿಸಿ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ವಿತರಣೆ

Views: 124
ಬರುವ ಏಪ್ರಿಲ್ 1 ರಿಂದ ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ನಯನ ಮೋಟಮ್ಮ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸದಾಗಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ವಿತರಿಸುವ ಕಾರ್ಯ ಏಪ್ರಿಲ್ 1ರಿಂದ ಆರಂಭವಾಗಲಿದೆ. ಹೊಸ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲೇ ಕಾರ್ಡ್‌ಗಳನ್ನು ವಿತರಿಸುವ ಕೆಲಸ ಮಾಡಲಾಗುವುದು ಎಂದರು
ಈ ಹಿಂದೆ ಬಿಪಿಎಲ್ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿದ್ದು, ಈ ಅರ್ಜಿಗಳ ಪರಿಶೀಲನಾ ಕಾರ್ಯ ನಡೆದಿದೆ. ಮಾರ್ಚ್ ತಿಂಗಳ 31 ರೊಳಗೆ ಈ ಎಲ್ಲ ಬಾಕಿ ಅರ್ಜಿಗಳ ಪರಿಶೀಲನೆ ಮುಗಿಸಿ ಅರ್ಹರಿಗೆ ಕಾರ್ಡ್ ನೀಡುವಂತೆ ಆದೇಶವನ್ನು ನೀಡಿದ್ದೇನೆ. ಬಾಕಿ ಇರುವ ಈ ಅರ್ಜಿಗಳ ಪರಿಶೀಲನೆ ಮುಗಿದ ನಂತರ ಹೊಸದಾಗಿ ಕಾರ್ಡ್ ವಿತರಿಸಲು ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುವುದು. ಹೊಸದಾಗಿ ಅರ್ಜಿ ಹಾಕಿದವರಿಗೆ ಮುಂದಿನ ಒಂದು ತಿಂಗಳ ಒಳಗೆ ಕಾರ್ಡ್ ವಿತರಿಸಲಾಗುವುದು. ಎಪಿಎಲ್ ಹಾಗೂ ಬಿಪಿಎಲ್ ಎರಡೂ ಕಾರ್ಡ್‌ಗಳನ್ನು ವಿತರಿಸುವ ಕಾರ್ಯ ಏ.1ರಿಂದ ಆರಂಭವಾಗಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಅಗತ್ಯ ಇರುವವರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಕೆಲಸ ನಡೆದಿದೆ. ಇದರಲ್ಲಿ ಯಾವುದೇ ವಿಳಂಬ ಆಗುತ್ತಿಲ್ಲ. ಒಂದು ವಾರದೊಳಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಪಡಿತರ ಕಾರ್ಡ್ ಅವಶ್ಯಕತೆ ಇರುವವರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಇದುವರೆಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ 744 ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಬಿಪಿಎಲ್ ಕಾರ್ಡ್ ಪಡೆಯುವವರು 4 ಚಕ್ರದ ವಾಹನ ಹೊಂದಿರಬಾರದು ಎಂಬ ನಿಯಮವನ್ನು ಸಡಿಲಿಸಲಾಗಿದ್ದು, ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿರುವವರಿಗೂ ಬಿಪಿಎಲ್ ಕಾರ್ಡ್ ನೀಡುತ್ತೇವೆ. ಹಾಗೆಯೇ ಬಿಪಿಎಲ್ ಕಾರ್ಡ್ ಪಡೆಯುವವರ ವಾರ್ಷಿಕ ಆದಾಯ 1.20ಲಕ್ಷ ರೂ. ದಾಟಿರಬಾರದು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿ ಸಾವಿರ ಚದುರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆಯನ್ನು ಹೊಂದಿರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡದಿರುವ ನಿಯಮವೂ ಇದೆ. ಈ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.ಹಾಗೆಯೇ ಖಾಯಂ ಸರ್ಕಾರಿ ನೌಕರರು, ಸರ್ಕಾರದ ಅಥವಾ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳಿಗೂ ಬಿಪಿಎಲ್ ಕಾರ್ಡ್ ನೀಡಲು ಅವಕಾಶವಿಲ್ಲ ಎಂದು ಅವರು ಹೇಳಿದರು.