ಎಲ್‌ಪಿಜಿ ದರ 100 ರೂ.ಕಡಿತ ಮಾಡಿದ ಕೇಂದ್ರ ಸರ್ಕಾರ

Views: 98
ನವದೆಹಲಿ: ಮಹಾಶಿವರಾತ್ರಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮದ ನಡುವೆಯೇ ಅಡುಗೆ ಅನಿಲ ಸಿಲಿಂಡರ್‌ನ ಬೆಲೆ 100 ರೂ. ಇಳಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 100ರೂ. ಇಳಿಕೆಮಾಡುವ ಘೋಷಣೆ ಮೂಲಕ ದೇಶದ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉಡುಗೊರೆ ನೀಡಿದ್ದಾರೆ.
ಮಹಿಳಾ ದಿನದಂದು ನಮ್ಮ ಸರ್ಕಾರವು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಕಡಿತ ಮಾಡುತ್ತಿದೆ. ಇದು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ವಿಶೇಷವಾಗಿ ನಾರಿಶಕ್ತಿಗೆ ಪ್ರಯೋಜನವಾಗಲಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು 100 ರೂ. ಕಡಿತ ಮಾಡಿ ಎಲ್ಲರಿಗೂ ಅಡುಗೆ ಅನಿಲ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಜತೆಗೆ ದೇಶದ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದ ಜತೆಗೆ ಕುಟುಂಬದ ಯೋಗಕ್ಷೇಮ ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಅಡುಗೆ ಅನಿಲದ ಬೆಲೆ ಇಳಿಕೆ ಮಹಿಳೆಯರ ಸಬಲೀಕರಣ ಮತ್ತು ಸುಲಲಿತ ಜೀವನದ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮಹಿಳೆಯರಿಗೆ ಶುಭಾಶಯ
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಶುಭಾಶಯ ಕೋರಿದ್ದಾರೆ.
“ನಮ್ಮ ನಾರಿ ಶಕ್ತಿಯ ಶಕ್ತಿ, ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ವಂದಿಸುತ್ತೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗಳನ್ನು ಶ್ಲಾಘಿಸುತ್ತೇವೆ. ಶಿಕ್ಷಣ, ಉದ್ಯಮಶೀಲತೆ, ಕೃಷಿ, ತಂತ್ರಜ್ಞಾನ ಮತ್ತು ಹೆಚ್ಚಿನ ಉಪಕ್ರಮಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಮೇಲಿನ 100 ರೂ. ಸಬ್ಸಿಡಿಯನ್ನು ಮುಂದುವರೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಸಬ್ಸಿಡಿ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿತ್ತು.
ಕಳೆದ ವರ್ಷ ರಕ್ಷಾಬಂಧನ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ 100ರೂ. ಕಡಿತಗೊಳಿಸಿತ್ತು.