ರಾಜಕೀಯ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿ, ಸ್ಥಳೀಯರಿಗೆ ಟಿಕೆಟ್ ನೀಡಿ ಆಗ್ರಹಿಸಿ ಬೈಕ್ ರ‍್ಯಾಲಿ

Views: 55

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಶನಿವಾರ ಮಲ್ಪೆಯಿಂದ ಉಡುಪಿ ಬಿಜೆಪಿ ಕಚೇರಿಯವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡು ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.

ಮೀನುಗಾರ ಮುಖಂಡ ಕಿಶೋರ್ ಡಿ.ಸುವರ್ಣ ನೇತೃತ್ವದಲ್ಲಿ  ಹೊರಟ ರ‍್ಯಾಲಿಯು ಆದಿಉಡುಪಿ, ಕರಾವಳಿ ಬೈಪಾಸ್, ಬನ್ನಂಜೆ, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೇರಿದ ಕಾರ್ಯಕರ್ತರು ಶೋಭಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕಾರ್ಯಕರ್ತರು, ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿ, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಬಿಜೆಪಿ ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಈ ಕ್ಷೇತ್ರದ ಅಭ್ಯರ್ಥಿಯ ಬದಲಾವಣೆಯನ್ನು ಕೇಳುತ್ತಿದ್ದಾರೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬಳಿ ಪಕ್ಷದ ಹಿರಿಯ ಕಾರ್ಯಕರ್ತರು ಕ್ಷೇತ್ರದ ಸಮಸ್ಯೆ ತೆಗೆದುಕೊಂಡು ಹೋದಾಗ ದರ್ಪದಿಂದ ಮಾತನಾಡುತ್ತಾರೆ. ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿ ಕಾರ್ಯಕರ್ತರ ಜೊತೆ ಈ ರೀತಿ ವರ್ತನೆ ಸರಿಯಲ್ಲ. ಅಲ್ಲದೆ ನಮ್ಮನ್ನೇ ಬಾಡಿಗೆ ಕಾರ್ಯಕರ್ತರು ಎಂಬುದಾಗಿ ಸಂಸದರು ಹೇಳಿಕೆ ನೀಡುತ್ತಾರೆ.ನಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ದೂರಿದರು.

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕೆಂಬ ಎಚ್ಚರಿಕೆಯ ಕರೆಗಂಟೆಯನ್ನು ಕಾರ್ಯಕರ್ತರು ನೀಡುತ್ತಿದ್ದಾರೆ. ಸುಶಿಕ್ಷಿತ ಹಾಗೂ ಭ್ರಷ್ಟಾಚಾರ ರಹಿತರಾಗಿರುವ ಮತ್ತು ಸ್ಥಳೀಯ ಹಾಗೂ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಸಮಗ್ರ ಅಭಿವೃದ್ಧಿಗೆ ಪ್ರಮೋದ್ ಮಧ್ವರಾಜ್ ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದರು.

‘ನಮಗೆ ಉಡುಪಿಯಲ್ಲಿ ಬದಲಾವಣೆ ಬೇಕು. ಕಳೆದ 10ವರ್ಷಗಳಿಂದ ಒಬ್ಬರನ್ನೇ ಆಯ್ಕೆ ಮಾಡಿದ್ದೇವೆ. ಅವರು ಕೇವಲ ಮೋದಿ ಹೆಸರಿನಲ್ಲಿ ಚುನಾಯಿತರಾಗಿ ಬರುತ್ತಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಇವರಿಗೆ ಚುನಾವಣೆ ಬಂದಾಗ ಮಾತ್ರ ಕ್ಷೇತ್ರದ ನೆನಪು ಆಗುತ್ತದೆ. ಈಗ ಮತ್ತೆ ಬಂದು ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಈ ಕ್ಷೇತ್ರದ ಅಭ್ಯರ್ಥಿ ಯಾರು ಎಂದು ಕಾರ್ಯಕರ್ತರು ಹೇಳಬೇಕೆ ಹೊರತು ಇವರೇ ಹೇಳುವುದಲ್ಲ. ಐದು ವರ್ಷಗಳಿಗೆ ಒಮ್ಮೆ ಕ್ಷೇತ್ರಕ್ಕೆ ಬಂದರೆ ಅಭಿವೃದ್ಧಿ ಹೇಗೆ ಆಗಲು ಸಾಧ್ಯ. ಸಂಸದರಿಗೆ ಮಲ್ಪೆ ಬಂದರಿಗೆ ಕೇವಲ 3ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸಲು ಇನ್ನೂ ಸಾಧ್ಯವಾಗಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Related Articles

Back to top button