ರಾಜ್ಯ ರಾಜಕಾರಣದಲ್ಲಿ ಕುತೂಹಲ ಬೆಳವಣಿಗೆ.. ಬಜೆಟ್ ಸಭೆ ಬಿಟ್ಟು ಡಿಸಿಎಂ ಡಿಕೆಶಿ ದೆಹಲಿ ಪಯಾಣ!
Views: 36
ಕನ್ನಡ ಕರಾವಳಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ಬೆಳವಣಿಗೆ ಸಂಭವಿಸಿದೆ ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದರೆ, ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಮುಖ ಪೂರ್ವಭಾವಿ ಸಭೆ ಕೈಬಿಟ್ಟು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಇಂದು ನಡೆಯಲಿರುವ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆಗಳ ಮಹತ್ವದ ಬಜೆಟ್ ಪೂರ್ವಭಾವಿ ಸಭೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಗೈರಾಗಲಿದ್ದಾರೆ. ಬೆಳಗ್ಗೆ 9.50ಕ್ಕೆ ಅವರು ದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಡಿಸಿಎಂ, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ, ಕಾನೂನು ಹೋರಾಟದ ಕುರಿತು ಸುಪ್ರೀಂಕೋರ್ಟ್ ವಕೀಲರೊಂದಿಗೆ ಹಾಗೂ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಾಯಕರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಸಂಘರ್ಷವೇ ಈ ದಿಢೀರ್ ಭೇಟಿಯ ಮೂಲ ಎನ್ನಲಾಗಿದೆ. ಸಿಎಂ ಬದಲಾವಣೆ ಅಥವಾ 2.5 ವರ್ಷದ ಅವಧಿಯ ಸ್ಪಷ್ಟ ಸೂತ್ರಕ್ಕಾಗಿ ಡಿಕೆಶಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ. ಬಜೆಟ್ ಸಭೆಗೆ ಗೈರಾಗುವ ಮೂಲಕ ಅವರು ಹೈಕಮಾಂಡ್‌ಗೆ ಪರೋಕ್ಷವಾಗಿ ಅಸಮಾಧಾನದ ಸಂದೇಶ ರವಾನಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
“ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದೆಹಲಿ ಪ್ರವಾಸದಲ್ಲಿ ರಾಜಕಾರಣದ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ದೆಹಲಿ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
ಬಜೆಟ್ ಸಭೆಯ ನಡುವೆ ದೆಹಲಿ ಭೇಟಿ ಬಗ್ಗೆ ಕೇಳಿದಾಗ ಹಾಗೂ ರಾಹುಲ್ ಗಾಂಧಿ ನಿಮ್ಮನ್ನು ಕರೆಯುತ್ತಿದ್ದಾರೆಯೇ ಎಂದು ಎಂದಾಗ, “ಭೇಟಿ ಮಾಡುವ ಎಲ್ಲಾ ಹೆಸರನ್ನು ಹೇಳಲು ಆಗುವುದಿಲ್ಲ. ನಿಮಗೆ ಏಕೆ ಇಷ್ಟು ಕುತೂಹಲ. ನಾನು ಉಪಮುಖ್ಯಮಂತ್ರಿ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಕೂಡ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್ 10 ಕ್ಕೆ 6 ವರ್ಷವಾಗುತ್ತದೆ. ನಮ್ಮ ಸಂಸದರನ್ನು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಾ ಇರುತ್ತೇನೆ, ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲಾ ಹೇಳುತ್ತಾ ಇರುತ್ತೇನೆ” ಎಂದರು.
ನಿಮ್ಮ ಇಲಾಖೆಗೆ ಸಂಬಂಧಿದಂತೆ ಬಜೆಟ್ ಪೂರ್ವಸಿದ್ಧತಾ ಸಭೆ ಕರೆದಿದ್ದು, ನೀವು ದೆಹಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ, “ನಾನು ಸಿಎಂ ಅನುಮತಿ ಪಡೆದುಕೊಳ್ಳುತ್ತಿದ್ದೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು, ಮಂಗಳವಾರದ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನನಗಿಂತ ಸಿಎಂ ಅವರಿಗೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಗೊತ್ತಿದೆ. ಮೇಕೆದಾಟು ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ಮಾಡಿದ್ದಾರೆ” ಎಂದರು.






