ಇತರೆ
ಬೈಂದೂರು-ಬಿಜೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್‌ಸ್ಪೋಟ: ಲಾರಿ ಬೆಂಕಿಗಾಹುತಿ
Views: 36
ಕನ್ನಡ ಕರಾವಳಿ ಸುದ್ದಿ: ಟಯರ್ ಸ್ಫೋಟಗೊಂಡು ಲಾರಿ ಹೊತ್ತಿ ಉರಿದ ಘಟನೆ ಬೈಂದೂರು-ಬಿಜೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆಯಲ್ಲಿ ಫೆ.19ರ ಮಧ್ಯ ರಾತ್ರಿ ಸಂಭವಿಸಿದ್ದು, ಚಾಲಕ ಚಂದ್ರಕಾಂತ್ ಅವರು ಕೆಳಗೆ ಜಿಗಿದು ಪಾರಾಗಿದ್ದಾರೆ.
ಧಾರವಾಡದಿಂದ ಬೈಂದೂರು ಮಾರ್ಗವಾಗಿ ಕುಂದಾಪುರ ಕಡೆಗೆ ಪಶು ಆಹಾರಗಳನ್ನು ಸಾಗಿಸುತ್ತಿದ್ದ ಲಾರಿಯು ಗುರುವಾರ ರಾತ್ರಿ ಸುಮಾರು 1 ಗಂಟೆಗೆ ಬಿಜೂರು ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಅದರ ಹಿಂಬದಿಯ ಟಯರ್‌ಸ್ಫೋಟಗೊಂಡು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಲಾರಿಯಲ್ಲಿದ್ದ ಆಹಾರದ ಚೀಲಗಳಿಗೆ ಬೆಂಕಿ ಆವರಿಸಿ, ಲಕ್ಷಾಂತರ ರೂ. ಮೊತ್ತದ ಪಶು ಆಹಾರಗಳು ಬೆಂಕಿಗಾಹುತಿಯಾಗಿವೆ. ಲಾರಿ ಸಂಪೂರ್ಣ ಸುಟ್ಟುಹೋಗಿದೆ.
ಬೈಂದೂರು ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದರು. ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ವಾಹನಗಳ ಸಂಚಾರದಲ್ಲಿ ಸಮಸ್ಯೆ ಉಂಟಾಯಿತು. ಬೈಂದೂರು ಪೊಲೀಸರು ಆಗಮಿಸಿ ಯಡ್ತರೆ ಮತ್ತು ಬಿಜೂರು ಜಂಕ್ಷನ್ ಬಳಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿದರು.






