ರಾಜಕೀಯ

ಇಂಡಿಯಾ ಮೈತ್ರಿಕೂಟ ತೊರೆದು ಮತ್ತೆ ಎನ್‌ಡಿಎಗೆ ನಿತೀಶ್ ಕುಮಾರ್?

Views: 70

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಪಾಲುದಾರರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ದಿನಗಳಲ್ಲಿ, ಇಬ್ಬರು ಪ್ರಮುಖ ನಾಯಕರಾದ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಸಖ್ಯಕ್ಕೆ ನಿತೀಶ್ ಕುಮಾರ್ ವಾಪಸಾತಿ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಸಂದೇಹ ವ್ಯಕ್ತಪಡಿಸುತ್ತಿದ್ದರೂ ಪಕ್ಷದ ಉನ್ನತ ನಾಯಕತ್ವ ಮನಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಮೈತ್ರಿಕೂಟದ ನಾಯಕರು ಮಾತ್ರ ಸಿಟ್ಟಿಗೆದ್ದಿರುವ ಮುಖ್ಯಮಂತ್ರಿಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಊಹಾಪೋಹದ ಸುದ್ದಿ ನಿಜವಾದರೆ 72 ವರ್ಷದ ನಿತೀಶ್ ಕುಮಾರ್ ಅವರಿಗೆ ಇದು ಐದನೇ ಬದಲಾವಣೆಯಾಗುತ್ತದೆ. 2013 ರಿಂದಲೂ ಅವರು ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವೆ ತೂಗಾಡುತ್ತಿದ್ದಾರೆ. ಅದೇ ಸಮಯದಲ್ಲಿ ರಾಜ್ಯದಲ್ಲಿ ತಮ್ಮ ಸ್ಥಾನವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅವರು ಮಹಾಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಸೇರಿದ ಕೇವಲ ಮೂರು ವರ್ಷಗಳ ನಂತರ 2022 ರಲ್ಲಿ ಆರ್‌ಜೆಡಿ-ಕಾಂಗ್ರೆಸ್ ಸಖ್ಯ ಬೆಳೆಸಿದ್ದಾರೆ.

ವಂಶಾಡಳಿತದ ರಾಜಕೀಯದ ಬಗ್ಗೆ ಮುಖ್ಯಮಂತ್ರಿಯವರ ತೀಕ್ಷ್ಣವಾದ ಹೇಳಿಕೆಗಳು ಮತ್ತು ನಂತರ ಲಾಲು ಯಾದವ್ ಅವರ ಪುತ್ರಿ ನೀಡಿದ ಪ್ರತ್ಯುತ್ತರವು ಬಿರುಕು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಳೆದ ವಾರಗಳಲ್ಲಿ ಕಂಡುಬಂದಿವೆ.

ಇಂಡಿಯಾ ಕೂಟದ ಚುನಾವಣಾ ತಯಾರಿಯಲ್ಲಿ ಸ್ಪಷ್ಟತೆಯ ಕೊರತೆ ಮತ್ತು ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಅಂಗೀಕರಿಸಲ್ಪಟ್ಟಿರುವ ಬಗ್ಗೆ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆ ವಿಳಂಬವಾಗುತ್ತಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.

Related Articles

Back to top button