ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಮನೆ ನೆಲಸಮ!

Views: 0
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ನೆಲಸಮ ಮಾಡಲು ಆಡಳಿತ ಮುಂದಾಗಿದೆ.
15 ವರ್ಷದ ಬಾಲಕಿಯೊಬ್ಬಳು, ಅರೆಬೆತ್ತಲೆಯಾಗಿ ರಕ್ತಸ್ರಾವದೊಂದಿಗೆ ಸಹಾಯಕ್ಕಾಗಿ ಮನೆ-ಮನೆಗೆ ತೆರಳಿದ ವೀಡಿಯೊಗಳು ಕಳೆದ ವಾರ ಭಾರೀ ವೈರಲ್ ಆಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಭರತ್ ಸೋನಿ ಎಂಬ ಆಟೋ ರಿಕ್ಷಾ ಚಾಲಕನನ್ನು ಗುರುವಾರ ಬಂಧಿಸಲಾಗಿದೆ. ಸದ್ಯ ಭರತ್ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಅವರ ಕುಟುಂಬವು ಸರ್ಕಾರಿ ಭೂಮಿಯಲ್ಲಿ ಮನೆಯನ್ನು ನಿರ್ಮಿಸಿ ಹಲವು ವರ್ಷಗಳಿಂದ ವಾಸಿಸುತ್ತಿದೆ ಎಂದು ಉಜ್ಜಯಿನಿ ಮಹಾನಗರ ಪಾಲಿಕೆ ತಿಳಿಸಿದೆ.
ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಆದ್ದರಿಂದ ಅದನ್ನು ಕೆಡವಲು ಯಾವುದೇ ಸೂಚನೆ ಅಗತ್ಯವಿಲ್ಲ ಎಂದು ಪಾಲಿಕೆ ಆಯುಕ್ತ ರೋಷನ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶ ಪೊಲೀಸರ ಸಹಯೋಗದಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ನಾಳೆ ಮನೆ ನೆಲಸಮ ಕಾರ್ಯವನ್ನು ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಸುಮಾರು 700 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುದೀರ್ಘ ತನಿಖೆಯ ನಂತರ ಭರತ್‌ಗೆ ಬಂಧಿಸಲಾಗಿದೆ.
ಅಪ್ರಾಪ್ತ ಬಾಲಕಿ ಬೆತ್ತಲೆಯಾಗಿ ರಕ್ತಸ್ರಾವದೊಂದಿಗೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಉಜ್ಜಯಿನಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಬದ್‌ನಗರ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕಿ ಚಿಂದಿ ಬಟ್ಟೆಯನ್ನು ಹೊದ್ದುಕೊಂಡು ಮನೆ-ಮನೆಗೆ ತೆರಳಿ ನೆರವು ಕೇಳುವ ದೃಶ್ಯ ಸೆರೆಯಾಗಿತ್ತು.
ಆಕೆಯನ್ನು ಕಂಡ ಪಾದ್ರಿಯೊಬ್ಬರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಮನಗಂಡು ಆಕೆಯನ್ನು ಟವೆಲ್‌ನಲ್ಲಿ ಹೊದಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಬಯಲಾಗಿತ್ತು. ಬಾಲಕಿ ಈ ವೇಳೆ ತೀವ್ರವಾಗಿ ಅಸ್ವಸ್ಥರಾಗಿದ್ದರು. ವಿಶೇಷ ವೈದ್ಯಕೀಯ ಆರೈಕೆಗಾಗಿ ಆಕೆಯನ್ನು ಇಂದೋರ್‌ಗೆ ರವಾನಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಆಕೆಗೆ ರಕ್ತದಾನವನ್ನು ಮಾಡಿದ್ದಾರೆ.
ಘಟನೆ ನಡೆದ ಮೂರು ದಿನಗಳ ಬಳಿಕ ಆರೋಪಿ ಭರತ್‌ನನ್ನು ಬಂಧಿಸಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ಮಾಡುವಾಗ ಆರೋಪಿ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಭರತ್‌ನ ತಂದೆ, ತನ್ನ ಮಗ ಈ ಅಪರಾಧ ಮಾಡಿರುವುದಾದರೆ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದಾರೆ. ಇದಲ್ಲದೆ ಸ್ಥಳೀಯ ವಕೀಲರ ಸಂಘವು ನ್ಯಾಯಾಲಯದಲ್ಲಿ ಆರೋಪಿಯ ಪರ ವಕಾಲತ್ತು ವಹಿಸದಂತೆ ವಕೀಲರಿಗೆ ಆಗ್ರಹಿಸಿತ್ತು.